ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ನಾನು ಸ್ವಯಾರ್ಜಿತವಾಗಿ ಸಂಪಾದಿಸಿರುವ 3 ಸಾವಿರ ಎಕರೆಯಲ್ಲಿ ಕಲ್ಲಿದ್ದಲು ಮತ್ತು ಇತರೆ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದು ಮುಂಬೈನ ವಿವಿಧೆಡೆಗಳಲ್ಲಿ ನನಗೆ ಸೇರಿರುವ ಕಟ್ಟಡ ಮತ್ತು ಸ್ಥಿರ ಮತ್ತು ಚರ ಆಸ್ತಿಯಲ್ಲಿ ಗಳಿಸಿರುವ ಸಂಪತ್ತಿಗೆ ಪ್ರತಿ ವರ್ಷವೂ ಚಾಚೂ ತಪ್ಪದೆ 500 ಕೋಟಿ ಆದಾಯ ತೆರಿಗೆ ಪಾವತಿಸಿದ್ದೇನೆ ಎಂದು ಹೇಳಿದರು.
ನನಗೆ ಸೇರಿರುವ ಗಣಿಗಾರಿಕೆ ಮತ್ತು ಜರ್ಮನಿ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಇತರೆ ದೇಶಗಳಲ್ಲಿನ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಡಾ.ಸಿದ್ದರಾಜು ಸ್ವಾಮೀಜಿ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದು, ಇಂದು ಬ್ಯಾಂಕ್ ವಹಿವಾಟು ಮತ್ತು ಭೂಮಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದೇನೆ. ನನಗೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತು ಇಂದಿನಿಂದ ಡಾ.ಸಿದ್ದರಾಜು ಸ್ವಾಮಿ ಅವರಿಗೆ ಸೇರಿದೆ. ಇದು ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ ಎಂದು ಹೇಳಿದರು.ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ಅವರು ಸ್ವಹಿಚ್ಛೆಯಿಂದ ದಾನವಾಗಿ ನೀಡಿರುವ ಸಮಸ್ತ ಆಸ್ತಿಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಆಯುರ್ವೇದ ಪರಂಪರೆ ಮುಂದುವರೆಸಲು ಮತ್ತು ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು, ಬಡವರ ಮನೆಯಲ್ಲಿ ಬೆಳಕು ಮೂಡಲು ವಿನಿಯೋಗಿಸುತ್ತೇನೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಪುನಶ್ಚೇತನಗೊಳಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೊಸದುರ್ಗದ ಪರಮೇಶ್ವರಪ್ಪ ಮಾತನಾಡಿ, ಬೆಂಗಳೂರು ಮತ್ತು ದೇವನಹಳ್ಳಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಹೊನ್ನಾಳಿ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಸಾವಿರಾರು ಎಕರೆ ಭೂಮಿ ಇದೆ. ಡಿ.ದೇವರಾಜ ಅರಸು ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್‌ನಿಲ್ದಾಣ ಮತ್ತು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ನಿರ್ಮಿಸಲು ಮಠದ ಭೂಮಿ ನೀಡಿದ್ದರು. ದೇವನಹಳ್ಳಿ ಬಳಿ ಮಠಕ್ಕೆ ಸೇರಿರುವ ೪೦೦ ಎಕರೆ ಭೂಮಿ ಇದೆ. ರಾಜ್ಯದ ವಿವಿಧೆಡೆಗಳಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಭೂಮಿಯನ್ನು ಮಠಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿಸಿದರು.