ಕೇಂದ್ರದಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ-ಶಾಸಕ ಮಾನೆ

KannadaprabhaNewsNetwork | Updated : Mar 31 2024, 02:03 AM IST

ಸಾರಾಂಶ

ಉತ್ತರ ಭಾರತದ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಯಥೇಚ್ಛವಾಗಿ ಅನುದಾನ ನೀಡುತ್ತಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತೆರಿಗೆ ವಿಚಾರದಲ್ಲಿ ನಿರಂತರ ಅನ್ಯಾಸವೆಸಗಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ನಡೆದುಕೊಳ್ಳುತ್ತಿದೆ.

ಹಾನಗಲ್ಲ: ಉತ್ತರ ಭಾರತದ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಯಥೇಚ್ಛವಾಗಿ ಅನುದಾನ ನೀಡುತ್ತಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತೆರಿಗೆ ವಿಚಾರದಲ್ಲಿ ನಿರಂತರ ಅನ್ಯಾಸವೆಸಗಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ನಡೆದುಕೊಳ್ಳುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉತ್ತರದ ರಾಜ್ಯಗಳು ಭರಿಸುವ ತೆರಿಗೆಗೆ ಪ್ರತಿಯಾಗಿ ೪ ಪಟ್ಟು ಅಧಿಕ ಅನುದಾನ ನೀಡುವ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾತ್ರ ಶೇ. ೧೦ರಷ್ಟನ್ನೂ ನಮಗೆ ಅನುದಾನದ ರೂಪದಲ್ಲಿ ವಾಪಸ್ ನೀಡದೇ ತಾರತಮ್ಯ ಮಾಡುತ್ತಿದೆ. ಈ ನೀತಿಯನ್ನು ಪ್ರಶ್ನಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದರೂ ಸ್ಪಂದಿಸಲಿಲ್ಲ. ತೆರಿಗೆ ವಿಚಾರದಲ್ಲಿ ಅನ್ಯಾಯ ಮಾಡಲಾಗುತ್ತಿದೆ, ಈ ಕುರಿತು ಚರ್ಚೆಗೆ ಬನ್ನಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆಹ್ವಾನ ನೀಡಿದರೂ ತುಟಿ ಬಿಚ್ಚುತ್ತಿಲ್ಲ. ಅನುದಾನ ಬಿಡುಗಡೆಯಲ್ಲಿ ಅನ್ಯಾಯ ಮಾಡುತ್ತಿಲ್ಲ ಎನ್ನುವುದಾದರೆ ಚರ್ಚೆಯ ಸವಾಲು ಸ್ವೀಕರಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು. ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ ಮಾತನಾಡಿ, ಹಾನಗಲ್ ಕ್ಷೇತ್ರಕ್ಕೆ ಜನಾನುರಾಗಿ ಶಾಸಕ ಶ್ರೀನಿವಾಸ ಮಾನೆ ಸಿಕ್ಕಿದ್ದಾರೆ. ಇದೀಗ ಲೋಕಸಭೆಗೂ ಜನಾನುರಾಗಿ ಸಂಸದರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಬಂದಿದೆ ಎಂದರು.ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಹೆಡ್‌ಮೇಸ್ತ್ರಿ, ಉಪಾಧ್ಯಕ್ಷೆ ಲಲಿತಾ ಬಡಿಗೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಶಿವೂರ, ಮುಖಂಡರಾದ ಭರಮಣ್ಣ ಶಿವೂರ, ಮಲ್ಲಪ್ಪ ಕೋರಿ, ಗುಡ್ಡಪ್ಪ ಗಡಿಯಂಕನಹಳ್ಳಿ, ಪ್ರಕಾಶ ದುಂಡಳ್ಳಿ, ಶಿವಾನಂದಪ್ಪ ಬನಹಳ್ಳಿ, ಉಳವೆಣ್ಣ ಮಳೆಣ್ಣನವರ, ರಾಜೂ ಮಳೆಣ್ಣನವರ, ನಾಗಪ್ಪ ಗುಬ್ಬಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article