ಯಾದಗಿರಿ: ಗ್ರಾಹಕರು ಆನ್ ಲೈನ್ ಮೂಲಕ ದಿನಸಿ ವಸ್ತುಗಳನ್ನು ಸೇರಿದಂತೆಯೇ ಅಗತ್ಯ ಸಾಮಾನುಗಳನ್ನು ತರಿಸಿಕೊಳ್ಳದೆ, ಮಾರುಕಟ್ಟೆಯಲ್ಲಿರುವ ಅಂಗಡಿಗಳಲ್ಲಿಯೇ ಖರೀದಿಸುವ ಮೂಲಕ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಮಲ್ಲಿಕಾರ್ಜುನ ಶಿರಗೋಳ್ ಅವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವ ಮೂಲಕ ಬೇರೆ ಊರಿನ ವ್ಯಾಪಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಟ್ರೇಡಿಂಗ್ ಪರವಾನಿಗೆ ಬೇಕಾದ ದಾಖಲೆಗಳು ನೀಡಿದರೇ ಒಂದೇ ದಿನದಲ್ಲಿ ಕೆಲಸ ಮಾಡಿಕೊಡಲು ತಾವು ನಗರಸಭೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.ಸಾರ್ವಜನಿಕರು ಸ್ಥಳೀಯ ವ್ಯಾಪಾರಿಗಳ ಬಳಿಯೇ ವಸ್ತು ಖರೀದಿಸುವ ಮೂಲಕ ಆನ್ ಲೈನ್ ವ್ಯಾಪಾರಕ್ಕೆ ಇತಿಶ್ರೀ ಹೇಳಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿ ಡಾ.ಸಿದ್ದರಾಜ್, ಕಳೆದ ಹತ್ತು ವರ್ಷಗಳಿಂದ ಈ ಸಂಘದ ಪದಾಧಿಕಾರಿಗಳು ತಮ್ಮ ವ್ಯಾಪಾರದೊಂದಿಗೆ ಕೆಲವು ಸಾಮಾಜಿಕ ಕಳಕಳಿಯ ಕೆಲಸಗಳು ಮಾಡುತ್ತಿವೆ. ಹೀಗಾಗಿ ಅವರಿಗೆ ಉದ್ಯೋಗದ ಜೊತೆಗೆ ಜನರ ಕಳಕಳಿ ಇರುವುದು ಕೂಡ ಕಂಡು ಬರುತ್ತದೆ ಎಂದರು.ಸಂಘದ ಸಂಸ್ಥಾಪಕರೂ ಆದ ಹಿರಿಯ ಉದ್ಯಮಿ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಸಂಘವು ವ್ಯಾಪಾಸ್ಥರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಾಮಾಜಿಕ ಕೆಲಸದಲ್ಲೂ ತೊಡಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸಿದ್ದಣ್ಣಗೌಡ ಹಿರೇಗೌಡ ವಹಿಸಿದ್ದರು. ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಚೇಂಬರ್ ಆಫ್ ಕಾಮರ್ಸನ ಅಧ್ಯಕ್ಷ ದಿನೇಶಕುಮಾರ ದೋಖಾ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಚಂದ್ರಶೇಖರ ವಿ., ಖಾಜಾ ಖಲಿಲುಲ್ಲಾ, ಆಂಜನಯ್ಯ ಬೈಕಾರ್, ಅಶ್ಥತಕುಮಾರ ಪತ್ತಾರ್, ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತಕುಮಾರ ಜಾಧವ್ , ಗೌರವ ಅಧ್ಯಕ್ಷ ಸುರೇಶ ಬಾಡದ್, ಶಂಕರೆಣ್ಣ ಕಾಗಲಜಗಾರ್, ರಾಜೇಂದ್ರ ಕುಮಾರ ಶಾಲೆ ಸೇರಿದಂತೆಯೇ ಪದಾಧಿಕಾರಿಗಳು, ವ್ಯಾಪಾರಿಗಳು ಇದ್ದರು.