ಕರ್‌ಸಿರಿ ವೆಬ್‌ನಲ್ಲಿಯೇ ಮಾವು ಖರೀದಿಸಿ

KannadaprabhaNewsNetwork | Published : Apr 24, 2024 2:29 AM

ಸಾರಾಂಶ

ರಾಜ್ಯ ಮಾವು ಮತ್ತು ಮಾರಾಟ ನಿಗಮವು ಕಾರ್‌ಸಿರಿ ವೆಬ್‌ನಲ್ಲಿ ಮಾವು ಖರೀದಿಸಲು ಅವಕಾಶ ನೀಡಿದೆ. ಅಂಚೆ ಇಲಾಖೆ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣು ತಲುಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾವು ಬೆಳೆಗಾರರನ್ನು ನೇರ ಮಾರುಕಟ್ಟೆಗೆ ಉತ್ತೇಜಿಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ‘ಕರ್‌ಸಿರಿ’ ಆನ್‌ಲೈನ್‌ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಗ್ರಾಹಕರ ಮನೆ ಬಾಗಿಲಿಗೆ ವಿವಿಧ ತಳಿಯ ಮಾವು ಪೂರೈಸಲಿದೆ.

‘ಕರ್‌ಸಿರಿ’ ಆನ್‌ಲೈನ್‌ ತಂತ್ರಾಂಶ ಈಗಾಗಲೇ ಗ್ರಾಹಕರಿಗೆ ಲಭ್ಯವಿದ್ದು, ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರು ತಮಗಿಷ್ಟವಾದ ಮಾವುಗಳನ್ನು ಖರೀದಿಸಬಹುದಾಗಿದೆ. ಆಲ್ಫಾನ್ಸ್‌(ಬಾದಾಮಿ), ಸೇಂಧೂರ, ಬಂಗನ್‌ಪಲ್ಲಿ, ಮಲ್ಲಿಕಾ ಸೇರಿದಂತೆ 12ಕ್ಕೂ ಹೆಚ್ಚು ತಳಿಯ ಮಾವುಗಳು ಸುಮಾರು 154ಕ್ಕೂ ಅಧಿಕ ನೋಂದಾಯಿತ ಮಾವು ಬೆಳೆಗಾರರು ಬೆಂಗಳೂರು ನಗರದ ಎಲ್ಲ ಪ್ರದೇಶಗಳ ಗ್ರಾಹಕರಿಗೆ ಪೂರೈಕೆ ಮಾಡಲಿದ್ದಾರೆ.

ನೈಸರ್ಗಿಕ ಇಥೇಲಿನ್‌ ಅನಿಲದಿಂದ ಮಾಗಿಸಿದ ತಾಜಾ ಮಾವಿನ ಹಣ್ಣುಗಳನ್ನು ಬುಕ್ಕಿಂಗ್‌ ಮಾಡಿದ 5ರಿಂದ 7 ದಿನಗಳೊಳಗೆ ಮನೆಗಳಿಗೆ ತಲುಪಿಸಲಾಗುತ್ತದೆ. ಆರ್ಡರ್‌ಗಳನ್ನು ಅಂಚೆ ಇಲಾಖೆ ಸಹಯೋಗದೊಂದಿಗೆ ಎಕ್ಸ್‌ಪ್ರೆಸ್‌ ಪಾರ್ಸಲ್‌ ಸೇವೆಯ ಮೂಲಕ ತಲುಪಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಬಾಕ್ಸ್‌ ಖರೀದಿ ಕಡ್ಡಾಯ:ಗ್ರಾಹಕರು ಆನ್‌ಲೈನ್‌ನಲ್ಲಿ ಕನಿಷ್ಠ 3 ಕೇಜಿ ಮಾವು ಖರೀದಿಸಲೇಬೇಕು. ಡೆಲಿವರಿ ಸೇವಾ ಶುಲ್ಕ ಸೇರಿ ಹಣವನ್ನು ಮೊದಲೇ ಪಾವತಿ ಮಾಡಬೇಕು. ಕ್ಯಾಶ್‌ ಆನ್‌ ಡೆಲಿವರಿ ವ್ಯವಸ್ಥೆ ಇರುವುದಿಲ್ಲ. ಖರೀದಿ ಮಾಡಿದ ಮಾವಿನ ಹಣ್ಣುಗಳು ಹಾಳಾಗಿದ್ದರೆ (ಎರಡಕ್ಕಿಂತ ಹೆಚ್ಚು) ಮಾವು ನಿಗಮಕ್ಕೆ ಅಥವಾ ಆನ್‌ಲೈನ್‌ನಲ್ಲಿ ಯಾವ ರೈತರಿಂದ ಖರೀದಿ ಮಾಡಿರುತ್ತೀರೋ ಅವರ ಮೊಬೈಲ್‌ಗೆ ದೂರು ದಾಖಲಿಸಿದರೆ, ಬದಲಿಸಿಕೊಡುವ ವ್ಯವಸ್ಥೆಯೂ ಇರಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://karsirimangoes.karnataka.gov.in ಅಥವಾ ಗ್ರಾಹಕರ ಸಹಾಯವಾಣಿ: 7411168063 ಇಲ್ಲವೇ ಇ-ಮೇಲ್‌: karsirimangoes@gmail.com ಸಂಪರ್ಕಿಸಬಹುದಾಗಿದೆ. ಬಾಕ್ಸ್...ಮಾವು ತಳಿ ದರ (3 ಕೇಜಿ ಬಾಕ್ಸ್‌ಗೆ)ಅಲ್ಫಾನ್ಸ್‌(ಬಾದಾಮಿ) ₹685- ₹831

ಹಿಮಾಮ್‌ಪಸಂದ ₹800- ₹900

ಮಲ್ಲಿಕಾ ₹530- ₹550

ರಸಪೂರಿ ₹650- ₹675

ಸೆಂಧೂರ ₹370- ₹381

Share this article