ಕನ್ನಡಪ್ರಭ ವಾರ್ತೆ ಮಂಗಳೂರು
ಇದು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜಸೇವಕ, ಆಪದ್ಭಾಂಧವ ಚಾರ್ಮಾಡಿ ಹಸನಬ್ಬ ಅವರ ವಿನೀತ ಮಾತು.
ಮಂಗಳೂರು ಪ್ರೆಸ್‌ಕ್ಲಬ್ ಬುಧವಾರ ಏರ್ಪಡಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಹಸನಬ್ಬ ಚಾರ್ಮಾಡಿ ತನ್ನ ಸಮಾಜಸೇವೆಯ ನೋಟವನ್ನು ತೆರೆದಿಟ್ಟರು.ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುವನ್ನು ಉಪಚರಿಸಬೇಕು, ಅದು ಬಿಟ್ಟು ಅಪಘಾತದ ಫೋಟೋ ತೆಗೆದುಕೊಳ್ಳುತ್ತಾ ಅಪಘಾತಕ್ಕೆ ಕಾರಣರಾದವರೊಂದಿಗೆ ಜಗಳ ಕಾಯ್ದುಕೊಳ್ಳುತ್ತಾ ಕೂರುವುದು ಸರಿಯಲ್ಲ. ಪ್ರಥಮವಾಗಿ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು, ಉಳಿದೆಲ್ಲವೂ ನಂತರ. ಅಪಘಾತ ವೇಳೆ ಪೊಲೀಸ್ ಕೇಸು, ಸಾಕ್ಷ್ಯಕ್ಕೆ ಹೆದರಿ ಗಾಯಾಳುಗಳನ್ನು ಉಪಚರಿಸಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು.
ವಿ ಫೋರ್ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ, ಹಸನಬ್ಬರಂತಹ ಸಾಧಕರನ್ನು ಗುರುತಿಸಿ ಸಂವಾದ ನಡೆಸುವುದು ಶ್ಲಾಘನೀಯ. ಇದು ಹಸನಬ್ಬರಿಗೆ ಮಾತ್ರವಲ್ಲ ಪ್ರೆಸ್‌ಕ್ಲಬ್‌ಗೂ ಗೌರವ ತರುತ್ತದೆ ಎಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಇದ್ದರು.
ಚಾರ್ಮಾಡಿಯಲ್ಲಿ ಹಸನಬ್ಬರ ಆ್ಯಂಬುಲೆನ್ಸ್ ಸೇವೆ ಶೀಘ್ರ
ಮೊನ್ನೆ ರಾಜ್ಯೋತ್ಸವ ಪುರಸ್ಕಾರದಲ್ಲಿ ಸರ್ಕಾರ 5 ಲಕ್ಷ ರು. ಗೌರವ ಮೊತ್ತ ನೀಡಿದೆ. ಈ ಮೊತ್ತವನ್ನು ಸ್ವಂತ ಆ್ಯಂಬುಲೆನ್ಸ್ ಖರೀದಿಗೆ ಉಪಯೋಗಿಸುತ್ತಿದ್ದೇನೆ. ಆ್ಯಂಬುಲೆನ್ಸ್‌ಗೆ 8 ಲಕ್ಷ ರು. ಬೇಕು. ಉಳಿದ ಮೊತ್ತವನ್ನು ನಾವೇ ಕುಟುಂಬಸ್ಥರು ಟ್ರಸ್ಟ್ ಮಾಡಿಕೊಂಡು ಸಾಲದ ಮೂಲಕ ಭರಿಸುತ್ತೇವೆ. ನನ್ನ ಮೂವರು ಪುತ್ರರು ಇದರ ಜವಾಬ್ದಾರಿ ನಿರ್ವಹಿಸುತ್ತಾರೆ. ಬಳಿಕ ಕಂತು ಪಾವತಿಸಿ ಸಾಲ ತೀರಿಸುತ್ತೇವೆ. ಆ್ಯಂಬುಲೆನ್ಸ್ ಕೆಲವೇ ದಿನಗಳಲ್ಲಿ ಬರಲಿದೆ. ಪ್ರಸ್ತುತ ಟ್ರಸ್ಟ್‌ನ್ನು ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಯಾರು, ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ನಮ್ಮ ಆ್ಯಂಬುಲೆನ್ಸ್ ಉಚಿತ ಸೇವೆ ನೀಡಲಿದೆ ಎಂದು ಹಸನಬ್ಬ ಹೇಳಿದರು.