ಉಡುಪಿ: ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಬಿ.ವಿ. ಆಚಾರ್ಯ 1933ರಲ್ಲಿ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಜನಿಸಿದ್ದು. ಮಂಗಳೂರಿನ ಗಣಪತಿ ಪ್ರೌಢಶಾಲೆ, ಸೈಂಟ್ ಅಲೋಶಿಯಸ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಮುಂದೆ ಮೈಸೂರು ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. 1961 - 1965ರವರೆಗೆ ಹೆಚ್ಚುವರಿ ಸರ್ಕಾರಿ ಅಭಿಯೋಜಕ, ನಂತರ ದಕ ಜಿಲ್ಲಾ ಸರ್ಕಾರಿ ಪ್ಲೀಡರ್ ಆಗಿ, ಮುಂದೆ ಬೆಂಗಳೂರು ಹೈಕೋರ್ಟ್‌ನಲ್ಲಿ ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ವಿಷಯಗಳ ವಕಾಲತ್ತು ನಡೆಸಿದರು. ತಹಸೀಲ್ದಾರ್ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ವಕಾಲತ್ತು ನಡೆಸಿರುವ ಅವರು, ಗಂಗಾರಾಂ ಕಟ್ಟಡ ಕುಸಿತ ಪ್ರಕರಣ, ವೀರಪ್ಪ ಮೊಯ್ಲಿ ಟೇಪ್ ಪ್ರಕರಣ, ಬೆಂಗಳೂರು ವಿಮಾನ ಅಪಘಾತ ಪ್ರಕರಣಗಳ ವಿಚಾರಣಾ ಆಯೋಗಗಳ ಮುಂದೆ, ನವದೆಹಲಿಯಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಸಚಿವರ ಪರ ವಾದಿಸಿದ್ದಾರೆ. 2005ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರು ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದು, ಈ ಪ್ರಕರಣದಲ್ಲಿ ನೀಡಿದ್ದ ದೋಷಿ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿಯಿತು. 1989, 1992, 2007, 2008, 2011ರಲ್ಲಿ ಒಟ್ಟು 5 ಬಾರಿಗೆ ಕರ್ನಾಟಕದ ಅಡ್ವೊಕೇಟ್ ಜನರಲ್ ಆಗಿ, 2012ರಲ್ಲಿ ರಾಜೀನಾಮೆ ನೀಡುವವರೆಗೂ ಅವರು ಈ ಹುದ್ದೆಯಲ್ಲಿದ್ದರು.