ಉಪಚುನಾವಣೆ: 3 ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿಗಳಿಗೇ ಗೆಲವು-ಬೊಮ್ಮಾಯಿ

KannadaprabhaNewsNetwork |  
Published : Nov 23, 2024, 12:33 AM IST
456 | Kannada Prabha

ಸಾರಾಂಶ

ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯಗಳಲ್ಲೂ ಎನ್‌ಡಿಎ ಪಕ್ಷಗಳೇ ಅಧಿಕಾರಕ್ಕೆ ಬರಲಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ:

ರಾಜ್ಯದ ಮೂರು ಉಪಚುನಾವಣೆಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ಎಕ್ಸಿಟ್‌ ಪೋಲ್‌ ನಂಬಿ ನಾನು ಮಾತನಾಡುತ್ತಿಲ್ಲ. ಅಲ್ಲಿನ ಜನರ ಮನದಾಳ ಅರಿತು ಹೇಳುತ್ತಿದ್ದೇನೆ ಎಂದರು.

ಕಾಂಗ್ರೆಸ್‌ನವರು ಎಕ್ಸಿಟ್‌ ಪೋಲ್ ಮೇಲೆ ನಂಬಿಕೆ ಇಲ್ಲ. ಮೂರು ಕ್ಷೇತ್ರಗಳಲ್ಲೂ ಅವರೇ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಫಲಿತಾಂಶ ಬರುವವರೆಗೂ ಅವರು ಹಾಗೆ ಹೇಳಲೇಬೇಕಲ್ಲ? ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದ ಅವರು, ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯಗಳಲ್ಲೂ ಎನ್‌ಡಿಎ ಪಕ್ಷಗಳೇ ಅಧಿಕಾರಕ್ಕೆ ಬರಲಿವೆ ಎಂದರು.

ಯೂ ಟರ್ನ್‌ ಸರ್ಕಾರ:

ರಾಜ್ಯದಲ್ಲಿರುವುದು ಯೂ ಟರ್ನ್‌ ಸರ್ಕಾರ. ಈ ಸರ್ಕಾರಕ್ಕೆ ದಿಕ್ಕುದೆಸೆ ಏನೂ ಇಲ್ಲ. ಯಾವ ನಾಯಕತ್ವವೂ ಇಲ್ಲ. ವಾಲ್ಮೀಕಿ ಹಣ ಲೂಟಿ ಹೊಡೆದರು. ಮತ್ತೆ ವಾಪಸ್‌ ಕಟ್ಟುತ್ತಿದ್ದಾರೆ. ವಕ್ಫ್‌ ವಿವಾದಕ್ಕೆ ಸಂಬಂಧಪಟ್ಟಂತೆ ರೈತರಿಗೆ ನೋಟಿಸ್‌ ಕೊಟ್ಟರು. ವಾಪಸ್‌ ಪಡೆದರು. ಮುಡಾದಲ್ಲಿ ಸೈಟ್‌ ತೆಗೆದುಕೊಂಡು ಮರಳಿ ಕೊಟ್ಟರು. ವಾಲ್ಮೀಕಿ ಹಣ ಲೂಟಿ ಹೊಡೆದು ಮರಳಿ ಕಟ್ಟುತ್ತಿದ್ದಾರೆ. ಇದೀಗ ಬಿಪಿಎಲ್‌ ಕಾರ್ಡ್‌ದಾರರ ವಿಷಯದಲ್ಲೂ ಅದೇ ರೀತಿ ಮಾಡಿದೆ. ಹೀಗಾಗಿ ಇದೊಂದು ಯೂಟರ್ನ್‌ ಸರ್ಕಾರ ಎಂದರು.

ಇದೀಗ ಆಸ್ಪತ್ರೆಗಳ ಸೇವೆಗಳ ಶುಲ್ಕ ಹೆಚ್ಚಳ ಮಾಡಿದ್ದಾರೆ. ಇವರಿಗೆ ಆಸ್ಪತ್ರೆ ನಡೆಸಲು ಆಗುತ್ತಿಲ್ಲ.. ಸರ್ಕಾರದ ಬಳಿ ದುಡ್ಡೇ ಇಲ್ಲ. ಸರ್ಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಹೊಂದಿಸಲು ಆಗುತ್ತಿಲ್ಲ. ಹೀಗಾಗಿಯೇ ಸೇವೆಗಳ ಶುಲ್ಕ ಹೆಚ್ಚಿಸಿದ್ದಾರೆ. ತೆರಿಗೆ ಹೊರೆ ಭ್ರಷ್ಟಚಾರದ ಹೊರೆ ಆಗಿದೆ. ಬಡವರು, ಎಸ್ಸಿಎಸ್ಟಿ ಜನರು ಈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ