ಉಡುಪಿ: ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಜಯಭೇರಿ ಬಾರಿಸಿದ್ದು ಜನರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಪಕ್ಷದ ಪರ ಮತ ಚಲಾಯಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ. ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ತಮ್ಮ ಎಲ್ಲ ಸ್ತರಗಳ ನಾಯಕರನ್ನು ಬಳಸಿದ್ದಲ್ಲದೆ ತಮ್ಮದೇ ಪಕ್ಷದಿಂದ ಉಚ್ಛಾಟನೆಗೊಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಳಸಿಕೊಂಡರೂ ಜನರ ಬಿಜೆಪಿಗರ ಸುಳ್ಳು ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಯಕತ್ವವನ್ನು ಮೆಚ್ಚಿ ಮತ ಚಲಾಯಿಸಿದ್ದಾರೆ. ಈ ಮೂಲಕ ಸಮರ್ಥ್ ಶಾಮನೂರು ಹಾಗೂ ಉಮೇಶ್ ಮೇಟಿ ಅವರ ಗೆಲುವಿಗೆ ಕಾರಣರಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ವಿಚಾರವನ್ನು ಮುಂದಿಟ್ಟು ಲಕ್ಷಾಂತರ ಮತದಾರರ ಹೆಸರನ್ನು ಕೈಬಿಟ್ಟದ್ದಲ್ಲದೆ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಚುನಾವಣಾ ನೀತಿಸಂಹಿತೆಯ ನೇರ ಉಲ್ಲಂಘನೆಯಾಗಿದೆ. ಇದಲ್ಲದೆ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಸೋಲಾದ ಕೂಡಲೇ ದೇಶದ ಪ್ರಧಾನಿಗಳು ಚುನಾವಣಾ ನೀತಿ ಸಂಹಿತೆಯನ್ನು ಮರೆತು ದೇಶವನ್ನು ಉದ್ದೇಶಿಸಿ ವಿರೋಧ ಪಕ್ಷಗಳನ್ನು ತೆಗಳಿ ಚುನಾವಣಾ ಭಾಷಣ ಮಾಡಿದ್ದರು. ಇವೆಲ್ಲವೂ ಕೂಡ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾದರೂ ಕೂಡ ಚುನಾವಣಾ ಆಯೋಗವು ನೋಡಿಯೂ ನೋಡದಂತೆ ಮೌನವಾಗಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದೆ. ಆದ್ದರಿಂದ ಪಶ್ಚಿಮ ಬಂಗಾಳದ ಬಿಜೆಪಿ ಬಹುಮತದ ಕ್ರೆಡಿಟ್ ಸಂಪೂರ್ಣವಾಗಿ ಚುನಾವಣಾ ಆಯುಕ್ತರಿಗೆ ಸಲ್ಲಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಡಿದ ಆಟವನ್ನು ದಕ್ಷಿಣ ಭಾರತದಲ್ಲಿ ಕೂಡ ಮಾಡಬಹುದು ಎಂಬ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಕೇರಳದಲ್ಲಿ ದೇಶದ ಪ್ರಧಾನಿಗಳು ಹಲವು ಬಾರಿ ಆಗಮಿಸಿ ಚುನಾವಣಾ ಪ್ರಚಾರ ಮಾಡಿದ್ದರೂ ಕೂಡ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಂಪೂರ್ಣವಾಗಿ ಸೋತಿದ್ದಾರೆ. ಕೇರಳದ ಜನತೆ ಈ ಬಾರಿ ಜವಾಬ್ದಾರಿಯುತವಾಗಿ ಮತ ಚಲಾಯಿಸಿದ್ದು ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್‌ಗೆ ಗೆಲುವು ತಂದುಕೊಟ್ಟಿದ್ದು ಸಂತೋಷದ ಸಂಗತಿಯಾಗಿದೆ. ಬಿಜೆಪಿ ಪಕ್ಷ ಚುನಾವಣಾ ಅಕ್ರಮಗಳನ್ನು ನಡೆಸುವುದರಲ್ಲಿ ಎಷ್ಟೊಂದು ನಿಸ್ಸೀಮ ಎನ್ನುವುದು ಶೃಂಗೇರಿ ಮರು ಮತಎಣಿಕೆಯಲ್ಲಿ ಇದು ಸಾಬೀತಾಗಿದೆ. ಇಂತಹ ಗಂಭೀರ ವಿಚಾರಗಳ ಬಗ್ಗೆ ದೇಶದ ನ್ಯಾಯಾಲಯಗಳು ಗಮನ ಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಈ ಮೂಲಕ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.