ಗಂಗಾವತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದಿಲ್ಲ

KannadaprabhaNewsNetwork |  
Published : May 13, 2025, 11:51 PM IST
13ಉಳಉ2,3 | Kannada Prabha

ಸಾರಾಂಶ

ಅಂಜನಾದ್ರಿ ಮತ್ತು ದುರ್ಗಾದೇವಿಯ ಆಶೀರ್ವಾದ ಜನರ್ದನ ರೆಡ್ಡಿ ಅವರ ಮೇಲಿದೆ ಹಾಗೂ ಅಭಿಮಾನಿಗಳ ಹಾರೈಕೆಯಿಂದ ಶೀಘ್ರವೇ ಜೈಲಿನಿಂದ ಹೊರಬರಲಿದ್ದು ಉಪಚುನಾವಣೆ ನಡೆಯುವ ಸಂದರ್ಭವೇ ಬರುವುದಿಲ್ಲ.

ಗಂಗಾವತಿ:

ಜನಾರ್ದನ ರೆಡ್ಡಿ ಅವರು ಯಾರಿಗೂ ಮೋಸ, ವಂಚನೆ ಮಾಡಿಲ್ಲ. ರಾಜಕೀಯ ಕುತಂತ್ರದಿಂದ ಜೈಲಿಗೆ ಹೋಗಿದ್ದಾರೆ. ಈ ಕಾರಣದಿಂದಲೇ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಮತ್ತೆ ಅವರು ಶಾಸಕರಾಗಿ ಗಂಗಾವತಿ ಕ್ಷೇತ್ರಕ್ಕೆ ಬರುತ್ತಾರೆ. ನೀವು ಎದೆಗುಂದಬೇಡಿ, ಧೈರ್ಯದಿಂದ ಇರಬೇಕು. ಯಾವುದೇ ಕಾರಣಕ್ಕೂ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ.

ಇದು, ಅಕ್ರಮ ಗಣಿಗಾರಿಕೆಯಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ಕಾರ್ಯಕರ್ತರು, ಅಭಿಮಾನಿಗಳಿಗೆ ಹೇಳಿದ ಮಾತುಗಳಿವು.

ಇಲ್ಲಿನ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಜನಾರ್ದನ ರೆಡ್ಡಿ ಅಭಿಮಾನಿಗಳು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಮಾತನಾಡಿದ ಲಕ್ಷ್ಮೀ ಅರುಣಾ ಅವರು, ಈ ಹಿಂದೇ ರಾಹುಲ್‌ ಗಾಂಧಿ ಸಹ ಸಂಸದ ಸ್ಥಾನದಿಂದ ಹಾಗೂ ತಮಿಳುನಾಡಿನ ಶಾಸಕರೊಬ್ಬರು ಅನರ್ಹಗೊಂಡಿದ್ದರು. ಬಳಿಕ ಆ ಅನರ್ಹತೆ ರದ್ದಾಯಿತು. ಅದೇ ರೀತಿ ಜನಾರ್ದನ ರೆಡ್ಡಿ ಅವರ ಅನರ್ಹತೆ ಸಹ ರದ್ದಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮರಳಿ ಬರುತ್ತಾರೆ. ಅಲ್ಲಿಯವರೆಗೆ ಕಾರ್ಯಕರ್ತರು, ಅಭಿಮಾನಿಗಳು ಕಾಯಬೇಕು ಎಂದರು.

ಅಂಜನಾದ್ರಿ ಮತ್ತು ದುರ್ಗಾದೇವಿಯ ಆಶೀರ್ವಾದ ರೆಡ್ಡಿ ಅವರ ಮೇಲಿದೆ ಹಾಗೂ ಅಭಿಮಾನಿಗಳ ಹಾರೈಕೆಯಿಂದ ಶೀಘ್ರವೇ ಜೈಲಿನಿಂದ ಹೊರಬರಲಿದ್ದು ಉಪಚುನಾವಣೆ ನಡೆಯುವ ಸಂದರ್ಭವೇ ಬರುವುದಿಲ್ಲ ಎಂದರು.

ಫೋಟೋ ಪ್ರದರ್ಶನ:

ಸಭೆಯಲ್ಲಿ ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಅವರ ಅಭಿಮಾನಿಗಳು ರೆಡ್ಡಿ ಅವರು ಶಾಸಕರಾಗಿ ಮತ್ತೆ ಬರಬೇಕೆಂದು ಘೋಷಣೆ ಕೂಗಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಮಾತನಾಡಿ, ಜನಾರ್ದನ ರೆಡ್ಡಿ ಅವರಿಗೆ ಶೀಘ್ರ ಜಾಮೀನು ದೊರೆಯಲಿದೆ. ಅದರೊಂದಿಗೆ ಶಿಕ್ಷೆಗೂ ತಡೆಯಾಜ್ಞೆ ಸಿಗಲಿದೆ. ಈ ಮೂಲಕ ಅನರ್ಹತೆಯ ಪಟ್ಟ ಕಳಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ವಿರೂಪಾಕ್ಷಪ್ಪ ಸಿಂಗನಾಳ, ಗಿರೇಗೌಡ ಹೊಸಕೇರಿ, ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅದ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಅಧ್ಯಕ್ಷೆ ಹೀರಾಬಾಯಿ, ಮಾಜಿ ಅಧ್ಯಕ್ಷ ಮೌಲಾಸಾಬ್‌, ಯಮನೂರು ಚೌಡ್ಕಿ, ರಮೇಶ ಹೊಸಮಲಿ, ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ಸೈಯದ್ ಅಲಿ, ಜಿಲಾನಿ ಪಾಷಾ ಸೇರಿದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ