ಬಿಜೆಪಿ ಅಪಪ್ರಚಾರಕ್ಕೆ ಉಪಚುನಾವಣೆಯೇ ಉತ್ತರ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork | Updated : Dec 09 2024, 11:51 AM IST

ಸಾರಾಂಶ

ಬಿಜೆಪಿ ನಾಯಕರು ಕೇವಲ ಗೊಂದಲ ಉಂಟು ಮಾಡುವ ಮೂಲಕ ಚುನಾವಣೆ ನಡೆಸುತ್ತಾರೆ.

 ಕುಷ್ಟಗಿ : ಬಿಜೆಪಿಯವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿ ಅಭಿವೃದ್ಧಿ ಪರ ಕೆಲಸ ಮಾಡಲು ತೊಂದರೆ ಕೊಡುತ್ತಿದ್ದು, ಅವರು ಕೆಲಸ ಮಾಡಲ್ಲ, ಮಾಡೋಕು ಬಿಡಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ನಿವಾಸದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ನಾಯಕರು ಕೇವಲ ಗೊಂದಲ ಉಂಟು ಮಾಡುವ ಮೂಲಕ ಚುನಾವಣೆ ನಡೆಸುತ್ತಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ವಕ್ಫ್‌, ಮುಡಾ, ವಾಲ್ಮೀಕಿ ಹಗರಣ ಎಂದೆಲ್ಲಾ ಗೊಂದಲ ಸೃಷ್ಟಿ ಮಾಡಿ ಚುನಾವಣೆ ನಡೆಸಿದರೂ ಸಹಿತ ಜನತೆಯು ಅವರಿಗೆ ತಕ್ಕಪಾಠ ಕಲಿಸಿದ್ದಾರೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಜೊತೆಗೆ ಅನೇಕ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಯ ಕಾಮಗಾರಿಗಳು ನಡೆದಿವೆ. ನಾಡಿನ ಜನರ ಅಭಿವೃದ್ಧಿಗಾಗಿಯೇ ಹಣ ಮೀಸಲಿಟ್ಟ ಸರ್ಕಾರ ನಮ್ಮದು. ನಾವು ಸಿಎಂ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ. 2028ಕ್ಕೂ ನಮ್ಮದೇ ಸರ್ಕಾರ ಬರುವುದು ಖಂಡಿತ ಎಂದರು.

ಕುಷ್ಟಗಿಯ ಅಭಿವೃದ್ಧಿಗೂ ನಮ್ಮ ಇಲಾಖೆಯಿಂದ ಸಹಕಾರ ನೀಡಲಾಗುವುದು.

ಸಂಸದ ರಾಜಶೇಖರ ಹಿಟ್ನಾಳ ಕುಷ್ಟಗಿ ಅಭಿವೃದ್ಧಿಗೆ ಗಮನ ಕೊಡಬೇಕು. ಅಮರೇಗೌಡರ ಜೊತೆ ಕೈ ಜೋಡಿಸಬೇಕು. ಈ ಹಿಂದೆ ನಡೆದ ಚುನಾವಣೆಯಲ್ಲಿ ಬಯ್ಯಾಪೂರ ಗೆಲ್ಲಬೇಕಾಗಿತ್ತು. ಜಾತಿ ವ್ಯವಸ್ಥೆಯಿಂದ ಅವರಿಗೆ ಸೋಲಾಗಿದೆ. 2028ರಲ್ಲಿ ಬಯ್ಯಾಪುರ ಅವರನ್ನು ಶಾಸಕರನ್ನಾಗಿ ಮಾಡಬೇಕು. ಶಿಗ್ಗಾಂವಿ ಉಪಚುನಾವಣೆ ಮಾದರಿಯಲ್ಲಿ ಮುಂದಿನ ಚುನಾವಣೆ ಮಾಡುವ ಮೂಲಕ ಜಯ ಸಾಧಿಸಬೇಕು. ಜೊತೆಗೆ ಮುಂದಿನ ಜಿಪಂ ತಾಪಂ ಚುನಾವಣೆಯನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯ ಎರಡು ನಾಟಕ ಕಂಪನಿಗಳು ವಕ್ಫ್ ವಿವಾದದ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ವಕ್ಫ್ ನೋಟಿಸು ಕೊಟ್ಟವರು ಮೊದಲು ಬಿಜೆಪಿಯವರೆ. ನಮ್ಮ ಜಿಲ್ಲೆಯಲ್ಲಿಯೇ 1367 ನೋಟಿಸನ್ನು 1467 ಹೆಕ್ಟೇರ್‌ ಭೂಮಿಗೆ ಕೊಟ್ಟಿದ್ದಾರೆ. ಈಗ ಅವರು ವಿರೋಧದ ನೆಪದಲ್ಲಿ ನಾಟಕ ಮಾಡುತ್ತಿದ್ದಾರೆ. ಅವರಿಗೆ ಜನರು ನೆಮ್ಮದಿಯಿಂದ ಇರುವುದು ಬೇಕಾಗಿಲ್ಲ ಎಂದರು.

ಬಿಜೆಪಿಯವರು ಕಳ್ಳರು ಇದ್ದಂಗೆ. ಪ್ರಧಾನಿ ಮೋದಿ ಅವರು ಬಾಂಡ್ ಹಗರಣದಲ್ಲಿ ತೊಡಗಿಕೊಂಡಿದ್ದಾರೆ. ಬಡವರ ಪರವಾದ ಆಡಳಿತ ಮಾಡಿಲ್ಲ. ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತಿ ವರ್ಷವೂ ₹100 ಕೋಟಿ ಅನುದಾನ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ಬಡವರ ಪರವಾದ ಯೋಜನೆಗಳು ಇದ್ದರೆ ಈ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಅವರು ಹೇಳಲಿ. ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ನಿರ್ಮಾಣವಾದ ಶಾಲೆಗಳಲ್ಲಿ ಇವರು ಕಲಿತು ಈಗ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳು ಶೂನ್ಯ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇವರಾಜು ಅರಸು ಮಾದರಿಯಲ್ಲಿ ಆಡಳಿತ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎರಡನೇ ದೇವರಾಜು ಅರಸು ಆಗಿದ್ದಾರೆ. ಸಿಎಂ ಹಾಗೂ ಡಿಸಿಎಂ ಜೊತೆಗೂಡಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತನಾಡಿ, ನಾನು ಸೋತರೂ ಪರವಾಗಿಲ್ಲ. ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿರುವ ಎಲ್ಲರಿಗೂ ಅಭಿನಂದನೆ ತಿಳಿಸಿ ಕುಷ್ಟಗಿಯ ಅಭಿವೃದ್ಧಿಗೂ ಶ್ರಮಿಸುತ್ತೇನೆ ಎಂದರು.

ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿದರು.

ಇದೇ ವೇಳೆ ಸಾಧಕರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭ ಬ್ಲಾಕ್ ಅಧ್ಯಕ್ಷ ಚಂದ್ರು ನಾಲತವಾಡ, ಕಲ್ಲಪ್ಪ ತಳವಾರ, ಶೇಖರಗೌಡ ಮಾಲಿಪಾಟೀಲ, ವಿಜಯನಾಯಕ, ಶುಖರಾಜ ತಾಳಕೇರಿ, ನೇಮಣ್ಣ ಮೇಲಸಕ್ರಿ, ಮಾಲತಿ ನಾಯಕ, ಉಮಾದೇವಿ ಪಾಟೀಲ, ಶಾರದಾ ಕಟ್ಟಿಮನಿ, ಶಿವಶಂಕರಗೌಡ ಕಡೂರು, ವಸಂತ ಮೇಲಿನಮನಿ, ದೊಡ್ಡಬಸವನಗೌಡ ಬಯ್ಯಾಪೂರ, ಲಾಡ್ಲೆಮಷಾಕ ದೋಟಿಹಾಳ, ಉಮೇಶ ಮಂಗಳೂರ, ಮೈನುದ್ದಿನ್‌ ಮುಲ್ಲಾ ಸೇರಿದಂತೆ ಅನೇಕರು ಇದ್ದರು. ಕೇದಾರನಾಥ ತುರಕಾಣಿ ಕಾರ್ಯಕ್ರಮ ನಿರ್ವಹಿಸಿದರು.

Share this article