ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಇಂದು ಉಪಚುನಾವಣೆ

KannadaprabhaNewsNetwork | Published : Dec 27, 2023 1:30 AM

ಸಾರಾಂಶ

ರಾಯಚೂರಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ-ಸಿಬ್ಬಂದಿ ವರ್ಗದವರು ಪೂರ್ವಭಾವಿ ಸಭೆ ನಡೆಯಿತು. ಜಿಲ್ಲೆ ವಿವಿಧ ಪ್ರದೇಶಗಳಲ್ಲಿ ತೆರವಾದ ಸ್ಥಾನಕ್ಕೆ ಮತದಾನ, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ, ಚುನಾವಣೆ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ತರಬೇತಿ.

ಕನ್ನಡಪ್ರಭ ವಾರ್ತೆ ರಾಯಚೂರು

ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ಲಿಂಗಸುಗೂರು ಪುರಸಭೆ ಹಾಗೂ ದೇವದುರ್ಗ ಪುರಸಭೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಜರುಗಿಲಿದೆ. ಲಿಂಗಸುಗೂರು ಪುರಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉಳಿದ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವುದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

ಉಪಚುನಾವಣೆ ಹಿನ್ನೆಲೆ ಈಗಾಗಲೇ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳು ಸೇರಿ ಪಕ್ಷೇತರರು ನಾಮಪತ್ರಗಳನ್ನು ಸಲ್ಲಿಸಿ, ತಮ್ಮ ವಾರ್ಡ್‌ ಮಟ್ಟದಲ್ಲಿ ನಿರಂತರವಾಗಿ ಪ್ರಚಾರವನ್ನು ನಡೆಸಿದ್ದು, ಅದೇ ರೀತಿ ಜಿಲ್ಲಾಡಳಿತದಿಂದಲೂ ಸಹ ಮತದಾರರ ಪಟ್ಟಿ ಸಿದ್ಧಪಡಿಸುವುದು, ನಾಮಪತ್ರಗಳ ಸ್ವೀಕಾರ, ಪರಿಶೀಲನೆ ಸೇರಿದಂತೆ ಚುನಾವಣೆಗೆ ಆಯ್ಕೆಯಾದ ಅಧಿಕಾರಿ-ಸಿಬ್ಬಂದಿಗೆ ಮತದಾನ, ಮತ ಏಣಿಕೆ ಕುರಿತಾದ ಅಗತ್ಯ ತರಬೇತಿ ಸಹ ನೀಡಿದೆ.ಪೂರ್ವಭಾವಿ ಸಭೆ: ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ತಹಸೀಲ್ದಾರ್‌ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅಧ್ಯಕ್ಷತೆಯಲ್ಲಿ ಚುನಾವಣಾ ಪೂರ್ವ ಸಭೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಸಭೆ ಉದ್ದೇಶಿಸಿ ಮಾತನಾಡಿದ ಎಡಿಸಿ, ರಾಯಚೂರು ನಗರಸಭೆ, ಸಿಂಧನೂರು ನಗರಸಭೆ ಹಾಗೂ ದೇವದುರ್ಗ ಪುರಸಭೆಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ಜರುಗಿಲಿದ್ದು, ಈಗಾಗಲೇ ಮಸ್ಟರಿಂಗ್ ಕಾರ್ಯವು ಪಾದರ್ಶಕವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಉಪಚುನಾವಣೆಯು ಡಿ.27(ಬುಧವಾರ) ನಡೆಯಲಿದ್ದು, ಪುರುಷ ಮತದಾರರು 2687, ಮಹಿಳಾ ಮತದಾರರು 2840 ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 5528 ಮತದಾರರು ಒಟ್ಟು 5 ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ವರ್ಮಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿ.ವೈ ವಾಲ್ಮೀಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮದ್ಯ ಮಾರಾಟ ನಿಷೇಧ: ಜಿಲ್ಲೆಯ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ದೇವದುರ್ಗ ಪುರಸಭೆ ಹಾಗೂ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಉಪ ಚುನಾವಣೆಗೆ ಡಿ.27 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಡಿ.25ರಂದು ಸಂಜೆ 5 ಗಂಟೆಯಿಂದ ಡಿ.27 ರಂದು ಮದ್ಯರಾತ್ರಿ 12 ಗಂಟೆಯವರೆಗೆ ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಆದೇಶ ಹೊರಡಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಲಿಂಗಸೂಗೂರು ಪುರಸಭೆ ಪಟ್ಟಣ ಹಾಗೂ ಜಿಲ್ಲೆಯ ಗ್ರಾಮಾಂತರ ಹಾಗೂ ಲಿಂಗಸೂಗೂರು, ಸಿರವಾರ, ಮಸ್ಕಿ, ಮಾನ್ವಿ, ಮುದುಗಲ್ ಮತ್ತು ಹಟ್ಟಿ ಪಟ್ಟಣ ಪ್ರದೇಶಗಳಿಗೆ ಮದ್ಯ ಸಾಗಾಣಿಕೆ ಮಾಡುವ ವಾಹನಗಳನ್ನು ಹಾಗೂ ಡಿಪೋಗಳನ್ನು ಹೊರತುಪಡಿಸಿ ಡಿ.25ರಂದು ಸಂಜೆ 5 ಗಂಟೆಯಿಂದ ಡಿ.27 ರಂದು ಮಧ್ಯರಾತ್ರಿ 12 ಗಂಟೆವರೆಗೆ ಜಾರಿಗೆ ಬರುವಂತೆ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ದೇವದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Share this article