ಖಾಸಗಿ ಬೋರ್‌ಗಳ ಬಳಸಿ, ಕುಡಿವ ನೀರು ಸಮಸ್ಯೆ ನೀಗಿ

KannadaprabhaNewsNetwork |  
Published : Mar 31, 2024, 02:06 AM IST
ಕ್ಯಾಪ್ಷನಃ30ಕೆಡಿವಿಜಿ32ಃದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು, ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಹಿನ್ನೆಲೆ ತಕ್ಷಣ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ನೀರಿನ ಸಮಸ್ಯೆ ತಲೆದೋರಿದ ಕಡೆಗಳಲ್ಲಿ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು, ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಹಿನ್ನೆಲೆ ತಕ್ಷಣ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ನೀರಿನ ಸಮಸ್ಯೆ ತಲೆದೋರಿದ ಕಡೆಗಳಲ್ಲಿ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಡಾ. ಎಂ.ವಿ. ವೆಂಕಟೇಶ್ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಕಾಲುವೆ ಮತ್ತು ನದಿಯಲ್ಲಿನ ನೀರು ಹರಿವು ಕಡಿಮೆ ಆಗಿದ್ದರಿಂದ ಸಮಸ್ಯೆಯಾಗಿದೆ. ಆದರೂ ನದಿಗೆ ಹಾಗೂ ಕಾಲುವೆಗೆ ನೀರುಹರಿಸುವ ಮೂಲಕ ಮುಂದಿನ 1 ತಿಂಗಳ ಕಾಲ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜೊತೆಗೆ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಕಡೆ ಬೋರ್‌ಗಳು ಬತ್ತಿಹೋಗಿವೆ, ಇನ್ನು ಕೆಲವು ಕಡೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಳಿಕೆಯಾದ ಕೊಳವೆಬಾವಿಗೆ ಸಿಂಗಲ್‌ ಫೇಸ್‌ ಮೋಟಾರ್ ಪಂಪ್ ಅಳವಡಿಸುವ ಮೂಲಕ ನೀರನ್ನು ಪೂರೈಕೆ ಮಾಡಲು ತಿಳಿಸಿ, ಗ್ರಾಮ ಪಂಚಾಯಿತಿಗಳಲ್ಲಿನ 15ನೇ ಹಣಕಾಸು ಯೋಜನೆಯಡಿ ಹೊಸ ಸಿಂಗಲ್‌ ಫೇಸ್‌ ಮೋಟಾರ್ ಖರೀದಿಸಲು ತಿಳಿಸಿದರು.

ಖಾಸಗಿ ಬೋರ್‌ಗಳ ಗುರುತಿಸಿ:

ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗಿದೆಯೋ, ಅಂತಹ ಕಡೆ ಖಾಸಗಿ ಕೊಳವೆಬಾವಿಗಳ ಗುರುತಿಸಿ, ಬಾಡಿಗೆ ಆಧಾರದ ಮೇಲೆ ನೀರು ಪಡೆಯಲು ಮುಂದಾಗಬೇಕು. ಆದರೆ ಟ್ಯಾಂಕರ್‌ಗಳ ಮೇಲೆಯೇ ಹೆಚ್ಚು ಅವಲಂಬಿತವಾಗಬಾರದು ಎಂದು ಸಹ ಎಚ್ಚರಿಕೆ ನೀಡಿದರು. ಪ್ರತಿದಿನ ಒಬ್ಬರಿಗೆ ಕನಿಷ್ಠ 55 ಲೀಟರ್ ನೀರು ಪೂರೈಕೆ ಮಾಡಬೇಕಾಗಿದೆ. ಜಾನುವಾರುಗಳಿಗೂ ನೀರು ಪೂರೈಕೆ ಮಾಡುವುದರಿಂದ ಬಾಡಿಗೆ ಕೊಳವೆಬಾವಿಗಳಿಂದ ನಿರ್ವಹಣೆ ಸುಲಭವಾಗಲಿದೆ ಎಂದರು.

ಕೊಳವೆಬಾವಿ ಪುನಃಶ್ಚೇತನಕ್ಕೆ ಅನುದಾನ:

ಬೋರ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಬೋರ್‌ ಫ್ಲೆಶಿಂಗ್ ಮತ್ತು ಇನ್ನಷ್ಟು ಆಳಕ್ಕೆ ಕೊರತೆಯಲು ಯೋಜನೆ ರೂಪಿಸಬೇಕು. ಕೊಳವೆಬಾವಿಗಳ ಕೊರೆಯಲು ಜಿಲ್ಲೆಯಲ್ಲಿ 7 ರಿಂಗ್‌ಗಳನ್ನು ವಶಕ್ಕೆ ಪಡೆದು ನೀಡಲು ಸಾರಿಗೆ ಅಧಿಕಾರಿಗೆ ಆದೇಶ ನೀಡಲಾಗಿದೆ. ಎಲ್ಲೆಲ್ಲಿ ಅಗತ್ಯವಿದೆಯೋ, ಅಂತಹ ಕಡೆ ಮಾತ್ರ ಹಾಲಿ ಇದ್ದ ಕೊಳವೆಬಾವಿ ಆಳ ಮತ್ತು ಫ್ಲೆಶಿಂಗ್ ಮಾಡುವ ಕೆಲಸ ಮಾಡಬೇಕೆಂದರು.

ಸಾರ್ವಜನಿಕ ಬಳಕೆ ಬೋರ್ ಪಕ್ಕವೇ ಬೋರ್‌ ಕೊರೆಸುವಂತಿಲ್ಲ:

ಸಾರ್ವಜನಿಕ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಸಿದ್ದಲ್ಲಿ ಖಾಸಗಿಯವರು ಅದರ ಪಕ್ಕದಲ್ಲಿಯೇ ಬಂದು ಕೊಳವೆಬಾವಿ ಕೊರೆಯಲು ಅವಕಾಶ ಇರುವುದಿಲ್ಲ. ಒಂದು ವೇಳೆ ಸಾರ್ವಜನಿಕರು ಬೋರ್‌ ಕೊರೆಸಿದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯಡಿ ವಶಕ್ಕೆ ಪಡೆದುಕೊಳ್ಳಲು ಅವಕಾಶ ಇದೆ. ತಹಸೀಲ್ದಾರರು ಕ್ರಮ ಕೈಗೊಳ್ಳಬಹುದು ಎಂದರು.

ಬಾಡಿಗೆಗೆ ಪಡೆದ ಬೋರ್‌ಗಳು:

ಜಿಲ್ಲೆಯಲ್ಲಿ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯ 47 ಗ್ರಾಮಗಳಲ್ಲಿ 52 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ 17 ಬೋರ್‌ವೆಲ್ ಬಾಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ದಾವಣಗೆರೆ ತಾಲೂಕಿನಲ್ಲಿ 4 ಕೊಳವೆಬಾವಿ ಬಾಡಿಗೆ, ಜಗಳೂರು ತಾ: 11 ಖಾಸಗಿ ಬಾಡಿಗೆ, ಉಚ್ಚಂಗಿ ದುರ್ಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿ ಬೋರ್‌ವೆಲ್ ಪಡೆಯಲು ನಿರ್ದೇಶನ ನೀಡಲಾಯಿತು. ಚನ್ನಗಿರಿ ತಾ: 12 ಖಾಸಗಿ ಬೋರ್‌ವೆಲ್ ಪಡೆದು ಇನ್ನೂ 54 ಗುರುತಿಸಲಾಗಿದೆ. ಸೂಳೆಕೆರೆಗೆ ಭದ್ರಾ ನೀರು ಹರಿಸಿದರೆ ಶೇ.50ರಷ್ಟು ಸಮಸ್ಯೆ ಬಗೆಹರಿಯಲಿದೆ. ಹರಿಹರ ತಾ: 20 ಬಾಡಿಗೆ ಬೋರ್‌ವೆಲ್ ಪಡೆದಿದ್ದು, ಬಾನಳ್ಳಿಯಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲು ಸೂಚನೆ, ತಾಲೂಕಿನಲ್ಲಿ 28 ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ. ಹೊನ್ನಾಳಿ ತಾ: 6 ಖಾಸಗಿ ಬೋರ್‌ವೆಲ್ ಪಡೆದಿದ್ದು, ಹೊನ್ನಾಳಿ 12, ನ್ಯಾಮತಿ ತಾಲೂಕಿನ 7 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿ:

ಪಾಲಿಕೆ ವ್ಯಾಪ್ತಿಯಲ್ಲಿ 1089 ಕೊಳವೆಬಾವಿಗಳಿವೆ. ಕುಂದುವಾಡ ಕೆರೆಯಿಂದ 8-10 ದಿನಗಳಿಗೊಮ್ಮೆ ಹಳೇ ದಾವಣಗೆರೆಗೆ ನೀರು ನೀಡಲಾಗುತ್ತಿದೆ. ಟಿ.ವಿ.ಸೇಷನ್ ಕೆರೆಯಿಂದ 4-5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ರಾಜನಹಳ್ಳಿ ಜಾಕ್‌ವೆಲ್‌ನಿಂದ 60 ಎಂಎಲ್‌ಡಿ ನೀರು ಪೂರೈಕೆ ಮಾಡುತ್ತಿದ್ದು, ಇದರಲ್ಲಿ 20 ಎಂಎಲ್‌ಡಿ ನೀರು ಕುಂದುವಾಡ ಕೆರೆಗೆ ಸಂಗ್ರಹಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆಗ ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿನ ಹೊರತಾಗಿ, ವಾಹನಗಳ ವಾಷಿಂಗ್, ಸಸಿಗಳಿಗೆ ಹಾಗೂ ಇನ್ನಿತರೆ ಉದ್ದೇಶಕ್ಕಾಗಿ ನೀರು ಬಳಸಬಾರದು. ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಟ್ಯಾಂಕರ್ ಮಾಲೀಕರ ಎಂಪ್ಯಾನಲ್ ಮಾಡಲು ಸೂಚನೆ:

ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮಾಲೀಕರಿಂದ ದರಪಟ್ಟಿ ಪಡೆದು ಅವರೊಂದಿಗೆ ಸಭೆ ಮಾಡಿ ಏಕರೂಪದ ದರ ನಿಗದಿ ಮಾಡಲು ಕ್ರಮ ವಹಿಸಬೇಕು. ಮಾಲೀಕರು ಟ್ಯಾಂಕರ್ ನೋಂದಣಿ, ಆರ್.ಸಿ, ಟ್ಯಾಂಕರ್ ಸ್ವಚ್ಛತೆ, ಜಿಪಿಎಸ್ ಅಳವಡಿಕೆ ಹೊಂದಿರುವ ಷರತ್ತುಗಳಿಗೆ ಅನುಗುಣವಾಗಿ ಎಂಪ್ಯಾನಲ್ ಮಾಡಿಕೊಳ್ಳಬೇಕು. ಇದರಿಂದ ಸಮಸ್ಯೆ ಉದ್ಭವಿಸಿದಾಗ ಟ್ಯಾಂಕರ್ ಮೂಲಕ ನೀರು ನೀಡಲು, ತಕ್ಷಣ ಕ್ರಮ ವಹಿಸಲು ಅನುಕೂಲವಾಗುತ್ತದೆ ಎಂದರು.

ಕೆರೆ-ಕಟ್ಟೆಗಳ ಹೂಳೆತ್ತಲು ಸೂಚನೆ:

ಜಿಲ್ಲೆಯಲ್ಲಿ ಜಲಸಂಪನ್ಮೂಲ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಕೆರೆಗಳು ಸೇರಿದಂತೆ ಒಟ್ಟು 522 ಕೆರೆಗಳು ಜಿಲ್ಲೆಯಲ್ಲಿವೆ. ಆದರೆ, ಇರುವ ಕೊಳವೆಬಾವಿಗಳ ಸಂಖ್ಯೆ ಜಾಸ್ತಿ ಇದ್ದು ಅಂತರ್ಜಲಮಟ್ಟ ಕುಸಿಯಲು ಕಾರಣವಾಗಿದೆ. ಆದ್ದರಿಂದ ಈಗಿರುವ ಕೆರೆಗಳಲ್ಲಿನ ಹೂಳೆತ್ತಲು, ಏರಿ ಭದ್ರಪಡಿಸಲು ಮತ್ತು ರಿಪೇರಿ ಇದ್ದಲ್ಲಿ ದುರಸ್ತಿ ಕೆಲಸ ಮಾಡಲು ಮುಂದಾಗಬೇಕು. ಸಾರ್ವಜನಿಕ ಬೋರ್‌ಗಳ ಸುತ್ತಮುತ್ತ ಮಳೆನೀರು ಮರುಪೂರಣ ಮಾಡಲು ಮಳೆಕೊಯ್ಲು ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಕುಡಿಯುವ ನೀರಿನ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಅಡಚಣೆಯನ್ನು ಬೆಸ್ಕಾಂನಿಂದ ಮಾಡಬಾರದು. ತಕ್ಷಣವೇ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಟಿ.ಸಿ. ಸುಟ್ಟು ಹೋದಾಗ, ತಕ್ಷಣವೇ ರಿಪೇರಿ ಮಾಡಿ ಅಳವಡಿಸುವ ಕೆಲಸ ಮಾಡಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಮೋಟಾರ್ ಸುಟ್ಟಲ್ಲಿ ತಕ್ಷಣವೇ ರಿಪೇರಿ ಮಾಡಿಸುವ ಕೆಲಸ ಮಾಡಬೇಕು. ಪಿಡಿಒಗಳು ರಿಪೇರಿ ಮಾಡಿಸಲು ವಿಳಂಬ ಮಾಡುತ್ತಾರೆ ಎಂಬ ದೂರುಗಳಿವೆ. ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎನ್.ದುಗಶ್ರೀ, ಅಭಿಷೇಕ್ ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ವಿಭಾಗ ಅಧಿಕಾರಿಗಳು ಉಪಸ್ಥಿತರಿದ್ದರು.

- - - ಕೋಟ್‌ ದಾವಣಗೆರೆ ಜಿಲ್ಲೆ ಅಂತರ್ಜಲ ಕುಸಿದ ಜಿಲ್ಲೆಯ ಪಟ್ಟಿಯಲ್ಲಿದ್ದು ಕೊಳವೆಬಾವಿ ಕೊರೆಯಲು ಫಾರಂ 7 ರಡಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆಯಬೇಕು. ಆದರೆ, ಇದುವರೆಗೂ ಯಾವುದೇ ಅರ್ಜಿ ನನ್ನ ಬಳಿ ಬಂದಿಲ್ಲ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ

- ಡಾ. ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

- - - -30ಕೆಡಿವಿಜಿ32ಃ:

ದಾವಣಗೆರೆಯಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ