ಬ್ಯಾಡಗಿ ಮುಖ್ಯರಸ್ತೆ ಶೇ. 90 ತೆರವು ಕಾರ್ಯ ಪೂರ್ಣ

KannadaprabhaNewsNetwork |  
Published : May 15, 2026, 02:00 AM IST
ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ತೆರವು ಕಾರ್ಯಾಚರಣೆ ನಡೆದಿದೆ. | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣದ ಬಹುದಿನಗಳ ಕನಸಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯ ಕಟ್ಟಡ ತೆರವು ಕಾರ್ಯಾಚರಣೆ ಗುರುವಾರ 6ನೇ ದಿನವೂ ಯಾವುದೇ ಅಡೆತಡೆಗಳಿಲ್ಲದೆ ಮತ್ತಷ್ಟು ವೇಗವಾಗಿ ಮುಂದುವರಿದಿದ್ದು, ಮುಂದಿನ ಸೋಮವಾರದೊಳಗೆ ಬಹುತೇಕ ಕಟ್ಟಡಗಳ ತೆರವು ಕಾರ್ಯ ಪೂರ್ಣಗೊಳ್ಳುವ ವಿಶ್ವಾಸ ಮೂಡಿದೆ.

ಬ್ಯಾಡಗಿ: ಪಟ್ಟಣದ ಬಹುದಿನಗಳ ಕನಸಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯ ಕಟ್ಟಡ ತೆರವು ಕಾರ್ಯಾಚರಣೆ ಗುರುವಾರ 6ನೇ ದಿನವೂ ಯಾವುದೇ ಅಡೆತಡೆಗಳಿಲ್ಲದೆ ಮತ್ತಷ್ಟು ವೇಗವಾಗಿ ಮುಂದುವರಿದಿದ್ದು, ಮುಂದಿನ ಸೋಮವಾರದೊಳಗೆ ಬಹುತೇಕ ಕಟ್ಟಡಗಳ ತೆರವು ಕಾರ್ಯ ಪೂರ್ಣಗೊಳ್ಳುವ ವಿಶ್ವಾಸ ಮೂಡಿದೆ.

ಕಳೆದ ಐದು ದಿನಗಳಿಂದ ಒಂದಲ್ಲೊಂದು ಅಡೆತಡೆ, ಪ್ರತಿಭಟನೆ, ಮನವೊಲಿಕೆ ಹಾಗೂ ಕಾನೂನು ಚರ್ಚೆಗಳ ನಡುವೆಯೇ ಸಾಗುತ್ತಿದ್ದ ಕಾರ್ಯಾಚರಣೆ ಬುಧವಾರ ಹಾಗೂ ಗುರುವಾರದಿಂದ ಗಣನೀಯ ವೇಗ ಪಡೆದುಕೊಂಡಿದೆ.

ಮುಖ್ಯರಸ್ತೆ ಅಗಲೀಕರಣ ಕಾರ್ಯಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾದರೂ ಇದೀಗ ಬಹುತೇಕ ವ್ಯಾಪಾರಸ್ಥರು ಹಾಗೂ ಕಟ್ಟಡ ಮಾಲೀಕರು ಸ್ವಯಂಪ್ರೇರಿತವಾಗಿ ಸಹಕರಿಸುತ್ತಿದ್ದಾರೆ. ಅನೇಕರು ತಮ್ಮ ಅಂಗಡಿ ಮುಂಗಟ್ಟು, ಶೆಡ್, ಮೆಟ್ಟಿಲು ಹಾಗೂ ಮುಂಭಾಗದ ಅತಿಕ್ರಮಣಗಳನ್ನು ತಾವೇ ತೆರವುಗೊಳಿಸುತ್ತಿದ್ದಾರೆ. ಇದರಿಂದ ಜೆಸಿಬಿ ಹಾಗೂ ಸಿಬ್ಬಂದಿ ಕಾರ್ಯ ಇನ್ನಷ್ಟು ವೇಗವಾಗಿ ಸಾಗಲು ಅನುಕೂಲವಾಗಿದೆ.30ಕ್ಕೂ ಹೆಚ್ಚು ಕಟ್ಟಡಗಳ ತೆರವು ಬಾಕಿ: ಮುಖ್ಯರಸ್ತೆಯ ಎರಡೂ ಬದಿಗಳಲ್ಲಿರುವ ಅನೇಕ ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದರೂ ಇನ್ನೂ 30ಕ್ಕೂ ಹೆಚ್ಚು ಕಟ್ಟಡಗಳ ತೆರವು ಕಾರ್ಯ ಬಾಕಿಯಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಸಾಧ್ಯತೆ ಇರುವುದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಮಳೆ ಆರಂಭವಾದರೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ.

ಅವಶೇಷ ತೆರವಿಗೂ ಆದ್ಯತೆ: ಒಂದು ಕಡೆ ಕಟ್ಟಡಗಳ ತೆರವು ಕಾರ್ಯ ಭರದಿಂದ ಸಾಗುತ್ತಿದ್ದರೆ, ಮತ್ತೊಂದು ಕಡೆ ಪುರಸಭೆ ಸಿಬ್ಬಂದಿ ಹಾಗೂ ಕಾರ್ಮಿಕರು ಅವಶೇಷಗಳಾದ ಕಲ್ಲು, ಮಣ್ಣು, ಇಟ್ಟಿಗೆ, ಕಬ್ಬಿಣ ಸೇರಿದಂತೆ ವಿವಿಧ ವಸ್ತುಗಳನ್ನು ತಕ್ಷಣವೇ ತೆರವುಗೊಳಿಸುವ ಕೆಲಸದಲ್ಲೂ ತೊಡಗಿದ್ದಾರೆ. ಸಾರ್ವಜನಿಕರಿಗೆ ಸಂಚಾರ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ರಸ್ತೆಯ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಚಾರ ಸುಗಮಕ್ಕೆ ಪರ್ಯಾಯ ವ್ಯವಸ್ಥೆ: ಮುಖ್ಯರಸ್ತೆಯಲ್ಲಿ ಜೆಸಿಬಿ, ಟ್ರ‍್ಯಾಕ್ಟರ್ ಹಾಗೂ ಲಾರಿಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಪೊಲೀಸರು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು, ಜನರು ಸಹ ಶಾಂತಿಯುತವಾಗಿ ಸಹಕರಿಸುತ್ತಿದ್ದಾರೆ. ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದಿಂದ ಪಟ್ಟಣದ ಬಹುಕಾಲದ ಕನಸಾದ ಅಗಲೀಕರಣ ಕಾರ್ಯ ಇದೀಗ ಅಂತಿಮ ಹಂತದತ್ತ ಸಾಗುತ್ತಿದೆ.ವೇಗವಾಗಿ ಕೆಲಸ: ಈಗಾಗಲೇ ಶೇ. 90ರಷ್ಟು ಕಟ್ಟಡಗಳನ್ನ ತೆರವು ಮಾಡಲಾಗಿದೆ. ಇನ್ನುಳಿದ ಶೇ. 10ರಷ್ಟನ್ನು ಹಂತ ಹಂತವಾಗಿ ತೆರವುಗೊಳಿಸುತ್ತೇವೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅವಶೇಷಗಳನ್ನು ತೆರವುಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಣಿಬೆನ್ನೂರು ಹಾಗೂ ಹಾವೇರಿ ನಗರದ ಎರಡು ಜೆಸಿಬಿ ಹಾಗೂ ನಾಲ್ಕು ಟ್ರ್ಯಾಕ್ಟರ್‌ ತರಿಸಿಕೊಂಡು ವೇಗವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.ಹೊಸ ದಿಕ್ಕು: ಅಗಲೀಕರಣ ಪೂರ್ಣಗೊಂಡ ಆನಂತರ ಪಟ್ಟಣದಲ್ಲಿ ಸುಗಮ ಸಂಚಾರ, ಅಪಘಾತಗಳ ಪ್ರಮಾಣದಲ್ಲಿ ಇಳಿಕೆ, ವ್ಯಾಪಾರ ವಹಿವಾಟಿಗೆ ಉತ್ತೇಜನ ಹಾಗೂ ನಗರ ಸೌಂದರ್ಯ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ. ಸಾರ್ವಜನಿಕರು ಸಹಕರಿಸುತ್ತಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದಂತಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ