ಬ್ಯಾಡಗಿ: ಪಟ್ಟಣದ ಜನರ ಬಹುದಿನದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಒಂದೂವರೆ ದಶಕಗಳ ಹೋರಾಟದ ಮುಖ್ಯರಸ್ತೆ (ಗಜೇಂದ್ರ ಗಡ ಸೊರಬ ರಾಜ್ಯ ಹೆದ್ದಾರಿ-136) ಅಗಲೀಕರಣಕ್ಕೆ ನ್ಯಾಯ ಸಿಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಅಂತೆಯೇ ಕಳೆದ 2 ದಿನಗಳಿಂದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಖುದ್ದಾಗಿ ತೆರವು ಕಾರ್ಯಾಚರಣೆಗೆ ಇಳಿದಿದ್ದು ಇದಕ್ಕೆ ಪುಷ್ಟಿ ನೀಡುತ್ತಿವೆ.
ಪುರಸಭೆಯಲ್ಲಿ ನಿರ್ಣಯ: ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಸಹ ಆಗಿದ್ದು, ಪುರಸಭೆ ಆಸ್ತಿಗಳೂ ಸೇರಿದಂತೆ ವಾಸಕ್ಕೆ ಯೋಗ್ಯವಲ್ಲದ ಹಾಗೂ ಶಿಥಿಲಾವಸ್ಥೆ ತಲುಪಿರುವ (ಅನ್‌ಸ್ಟೆಬಿಲಿಟಿ ಬಿಲ್ಡಿಂಗ್ಸ್) 29 ಕಟ್ಟಡಗಳ ತೆರವಿಗೆ ಮುಂದಾಗಿದ್ದಾರೆ.
ಎರಡನೇ ಕಟ್ಟಡ: ಪರಿಹಾರ ಪಡೆದುಕೊಳ್ಳುವ ಮುನ್ನವೇ ಪಟ್ಟಣದ ಗಜಾನನ ಅರ್ಬನ್ ಬ್ಯಾಂಕ್ ತನ್ನ ಒಡೆತನದ ಕಟ್ಟಡವನ್ನು ಸರ್ಕಾರದ ಅಧಿಸೂಚನಯಂತೆ 33 ಅಡಿಗಳಷ್ಟು ಬಿಟ್ಟು ತೆರವುಗೊಳಿಸಿಕೊಂಡಿತ್ತು. ಇದಾದ ಬಳಿಕ ಪುರಸಭೆ ಆಸ್ತಿಗಳು ಸೇರಿದಂತೆ ಇನ್ನುಳಿದ 29 ಕಟ್ಟಡಗಳನ್ನು ಪುರಸಭೆ ತೆರವುಗೊಳಿಸಲು ಮುಂದಾಗಿದೆ.ಬಾಡಿಗೆದಾರರ ತೆರವು: 2000-01ನೇ ಸಾಲಿನ 10ನೇ ಹಣಕಾಸು ಯೋಜನೆಯಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿತ್ತು. ಅಗಲೀಕರಣ ಹಿನ್ನೆಲೆಯಲ್ಲಿ ಬಾಡಿಗೆದಾರರನ್ನು ತೆರವುಗೊಳಿಸಿದ ಪುರಸಭೆ ಇದೀಗ ಕಟ್ಟಡಗಳನ್ನೂ ತೆರವುಗೊಳಿಸುತ್ತಿದೆ.
ಈ ವೇಳೆ ಪಿಎಸ್‌ಐ ಭಾರತಿ ಕುರಿ, ಪುರಸಭೆ ಎಂಜಿನಿಯರ್ ಸಂಗಮೇಶ ಹೊಸಮನಿ, ಮಾಲತೇಶ ಹಳ್ಳಿ ಉಪಸ್ಥಿತರಿದ್ದರು.ಅಭಿವೃದ್ಧಿಗೆ ಸಹಕರಿಸಿ: ಅಗಲೀಕರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಅಷ್ಟಕ್ಕೂ ಮಾಲೀಕರು ತಮ್ಮ ಕಟ್ಟಡಗಳನ್ನು ಸ್ವಯಂ ತೆರವುಗೊಳಿಸಿಕೊಂಡಲ್ಲಿ ತಕ್ಷಣವೇ ಪರಿಹಾರದ ಮೊತ್ತ ಕೈಸೇರಲಿದೆ. ಕಟ್ಟಡ ತೆರವಾಗುತ್ತಿದ್ದಂತೆ ಅದರ ಜತೆಗೆ ಮುಖ್ಯರಸ್ತೆ ಅಭಿವೃದ್ಧಿ ಕಾರ್ಯವನ್ನೂ ಮಾಡಲಾಗುವುದು. ಕೂಡಲೇ ಕಟ್ಟಡ ತೆರವುಗೊಳಿಸಿಕೊಂಡು ಅಭಿವೃದ್ಧಿಗೆ ಸಹಕರಿಸಿ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.