ಕನ್ನಡಪ್ರಭ ವಾರ್ತೆ ಉಡುಪಿ
ವಿದೇಶಗಳಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಗಳನ್ನು ಒದಗಿಸುವಲ್ಲಿ ನೆರವು ನೀಡುವ ಕೇರಳ ಮೂಲದ ಅಜಿನೋರಾ ಸಂಸ್ಥೆಯು ಇಲ್ಲಿನ ಬೈಂದೂರುನಲ್ಲಿ ಶಾಖೆಯನ್ನು ತೆರೆದಿದ್ದು, ಇದರ ವತಿಯಿಂದ ಮಾ.30ರಂದು ಬೆಳಗ್ಗೆ 10 ರಿಂದ ಸಂಸ್ಥೆಯ ಕಚೇರಿಯಲ್ಲಿ ಉಚಿತ ವೃತ್ತಿಜೀವನದ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೈಂದೂರು ಶಾಖೆಯ ಮುಖ್ಯಸ್ಥ ಸುಶೀಲ್ ಕುಮಾರ್, ಈ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಅಥವಾ ಬೋಧನಾ ಶುಲ್ಕ ರಹಿತ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯಗಳ ಬಗ್ಗೆ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡುವುದು ತುಂಬಾ ದುಬಾರಿಯಾಗಿದೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲಾಗುತ್ತದೆ ಎಂದರು.ವಿಶೇಷವಾಗಿ ಜರ್ಮನಿ, ನಾರ್ವೆ, ಆಸ್ಟ್ರಿಯಾ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದ ಶಿಕ್ಷಣವನ್ನು ನೀಡುತ್ತವೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ವಿದ್ಯಾರ್ಥಿಗಳ ಆಸಕ್ತಿ ಮತ್ತು ಗುರಿಗಳ ಆಧಾರದಲ್ಲಿ ಸರಿಯಾದ ಕೋರ್ಸುಗಳ ಆಯ್ಕೆ ಮಾಡಲು, ಖಚಿತವಾಗಿ ಭವಿಷ್ಯದ ಕನಸನ್ನು ಸಾಕಾರಗೊಳಿಸಲು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಈ ಕಾರ್ಯಕ್ರಮ ಸಹಾಯವಾಗುತ್ತದೆ ಎಂದರು.ಅಲ್ಲದೇ ವಿದ್ಯಾರ್ಥಿವೇತನ ಮತ್ತು ಹಣಕಾಸಿನ ನೆರವು ಪಡೆಯಲು ಬೇಕಾದ ತಯಾರಿಯ ಸಹಾಯವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ವಿವಿಧ ಅನುದಾನದ ಮೂಲಕ ಹೇಗೆ ಹಣ ಹೊಂದಿಸಬಹುದು ಎಂಬ ಮಾಹಿತಿಯನ್ನೂ ನೀಡಲಾಗುತ್ತದೆ. ವಿದೇಶ ವಿದ್ಯಾಲಯಗಳಲ್ಲಿ ಪ್ರವೇಶ ಪ್ರಕ್ರಿಯೆ ಮತ್ತು ಬೇಕಾದ ವೀಸಾ ಅವಶ್ಯಕತೆಗಳನ್ನು ಸಹ ಸಂಸ್ಥೆಯ ವತಿಯಿಂದ ಮಾಡಿಕೊಡಲಾಗುತ್ತದೆ. ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವಲ್ಲಿ ಒಳಗೊಂಡಿರುವ ಎಲ್ಲಾ ಹಂತಗಳಲ್ಲಿ ಮಾರ್ಗದರ್ಶನ ಮತ್ತು ಬೆಂಬಲವನ್ನು ನಮ್ಮ ಸಂಸ್ಥೆಯಿಂದ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿದೇಶಿ ಶಿಕ್ಷಣ ವಿಬಾಗದ ಮುಖ್ಯಸ್ಥೆ ಅಮಲಾ ಉಪಸ್ಥಿತರಿದ್ದರು.