ಜನರಲ್ಲಿ ಧಾರ್ಮಿಕ ಶ್ರದ್ಧೆ ಕ್ಷೀಣಿಸುತ್ತಿದೆ

KannadaprabhaNewsNetwork |  
Published : Dec 29, 2025, 01:15 AM IST
53 | Kannada Prabha

ಸಾರಾಂಶ

ನಮ್ಮ ದೇಶದ ಸಂಸ್ಕೃತಿ, ಧಾರ್ಮಿಕತೆ ತಿಳಿಯದ ಯುವ ಸಮೂಹ ಅನ್ಯಕೃತ್ಯಗಳಲ್ಲಿ ಭಾಗಿಯಾಗುವಂತಹ ಆಘಾತಕಾರಿ ಘಟನೆಗಳು ಜರುಗುತ್ತಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಶ್ರದ್ಧೆ ಕಡಿಮೆಯಾಗುತ್ತಿದ್ದು, ಯುವಜನರಿಗೆ ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯವರು ಬಿಲ್ವಾರ್ಚನೆ, ಧಾರ್ಮಿಕ ಸಭೆಯನ್ನು ಏರ್ಪಡಿಸಿರುವುದು ಶ್ಲಾಘನಿಯ ಕಾರ್ಯ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್ ಹೇಳಿದರು.

ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಲಕ್ಷ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಸಂಸ್ಕೃತಿ, ಧಾರ್ಮಿಕತೆ ತಿಳಿಯದ ಯುವ ಸಮೂಹ ಅನ್ಯಕೃತ್ಯಗಳಲ್ಲಿ ಭಾಗಿಯಾಗುವಂತಹ ಆಘಾತಕಾರಿ ಘಟನೆಗಳು ಜರುಗುತ್ತಿವೆ. ಆದ್ದರಿಂದ ನಮ್ಮ ಮಕ್ಕಳಲ್ಲಿ ಮತ್ತು ಯುವ ಸಮೂಹದಲ್ಲಿ ಧಾರ್ಮಿಕ ಮನೋಭಾವನೆ, ನೈತಿಕ ಶಿಕ್ಷಣವನ್ನು ನೀಡುವುದು ಅವಶ್ಯಕ. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಚಿಕ್ಕಂದಿನಿಂದಲೆ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವ ಮೂಲಕ ಅವರಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಮಹತ್ವವನ್ನು ತಿಳಿಸಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಫ್ಯಾಷನ್‌ ಗೆ ಒಗ್ಗಿಕೊಳ್ಳುತ್ತಿರುವ ಯುವ ಜನರು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳಿಂದ ದೂರಾಗುತ್ತಿದ್ದು, ವಿದೇಶಿ ಸಂಸ್ಕೃತಿ ನಮ್ಮ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಯುವಜನರೇ ಭವಿಷ್ಯದ ಆಸ್ತಿಯಾಗಿದ್ದಾರೆ. ಹೀಗಾಗಿ ಆಧುನಿಕ ಜೀವನ ಶೈಲಿಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರಿಕೆ ಅವಶ್ಯಕವಾಗಿದೆ. ಇನ್ನು ಪ್ರತಿಯೊಬ್ಬರೂ ಸಂಪತ್ತಿನ ಗಳಿಕೆಯ ಆಸೆಯಲ್ಲಿ ಮುಗಿಬಿದ್ದು, ಧಾವಂತದ ಬದುಕಿನಲ್ಲಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಒತ್ತಡದ ಬದುಕಿನಲ್ಲಿ ಬಳಲುತ್ತಿರುವ ಜನರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಧ್ಯಾನ, ಆಧ್ಯಾತ್ಮದೊಂದಿಗೆ ಒತ್ತಡ ರಹಿತ ಬದುಕನ್ನು ರೂಢಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವು ಸಮಾಜಮುಖಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಧರ್ಮರಾಜ್ ಮಾತನಾಡಿ, ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಹೆಚ್ಚಿಸುವ ಸಲುವಾಗಿ ಲಕ್ಷ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭೆ ಆಯೋಜಿಸಿದ್ದು ಸಂಸ್ಥೆಯ ಮೂಲಕ ಹಲವು ಸಮಾಜಮುಖಿ ಯೋಜನೆಗಳು ಜಾರಿಗೆ ತಂದು ಜನರಿಗೆ ಅಗತ್ಯ ನೆರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಸಭೆಯನ್ನುದ್ಧೇಶಿಸಿ ದೇವೀರಮ್ಮನಹಳ್ಳಿ ಶರಣ ಸಂಗಮ ಮಠಾಧ್ಯಕ್ಷ ಶ್ರೀ ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್ ಮಾತನಾಡಿದರು.

ಲಕ್ಷ ಬಿಲ್ವಾರ್ಚನೆ ಪೂಜಾ ಸಮಿತಿ ಅಧ್ಯಕ್ಷೆ ಲತಾ ಮುದ್ದುಮೋಹನ್, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಜಿ.ಟಿ. ಪ್ರತಿಮಾ, ಎಂ.ಎಸ್. ಶ್ಯಾಮಲ, ಶಿಸೀಲಿಯಾ, ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ಶಮಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ