ಕನ್ನಡಪ್ರಭ ವಾರ್ತೆ, ಕೊರಟಗೆರೆ ಬೈರಗೊಂಡ್ಲು ಡ್ಯಾಂ ಈಗ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಗಿದ್ದು, ಬಯಲುಸೀಮೆ ಕ್ಷೇತ್ರವಾದ ಕೊರಟಗೆರೆಗೆ ಎತ್ತಿನಹೊಳೆ ಯೋಜನೆಯಡಿ 62 ಕೆರೆಗಳಿಗೆ ನೀರು ಹರಿದು ಅಂತರ್ಜಲ ಅಭಿವೃದ್ಧಿ ಆಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಸಂದ್ರ ಬಳಿ ಸಣ್ಣನೀರಾವರಿ ಇಲಾಖೆಯಿಂದ ಬುಧವಾರ ಏರ್ಪಡಿಸಲಾಗಿದ್ದ ಎತ್ತಿನಹೊಳೆ ಯೋಜನೆಯ 62 ಕೆರೆಗಳಿಗೆ ನೀರು ಹರಿಯುವ ಕಾಮಗಾರಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಚುನಾವಣೆ ವೇಳೆ ನನ್ನ ಕ್ಷೇತ್ರದ ರೈತರಿಗೆ ನಾನು ನೀಡಿದ ಭರವಸೆ ಈಡೇರುವ ಕಾಲ ಹತ್ತಿರ ಬಂದಿದೆ. ಬಯಲುಸೀಮೆ ಕ್ಷೇತ್ರದ ರೈತರ ನೋವು ೨೦೨೭ಕ್ಕೆ ಮರೆಯಾಗಿ ಶಾಶ್ವತ ನೀರಾವರಿ ವರದಾನ ಆಗುತ್ತದೆ. ಶಾಸಕರು ಮತ್ತು ಸಚಿವರು ಯಾರು ಬೇಕಾದ್ರು ಆಗ್ತಾರೇ ಆದರೇ ಶಾಶ್ವಾತ ನೀರಾವರಿ ಯೋಜನೆಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ಹೇಳಿದರು. ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಿಂದ 285 ಕೋಟಿ ವೆಚ್ಚದಲ್ಲಿ ಕೊರಟಗೆರೆ ತಾಲೂಕಿನ ಕೋಳಾಲದ 25ಕೆರೆ, ಕಸಬಾದ 10, ಸಿ.ಎನ್.ದುರ್ಗದ 17 ಮತ್ತು ಹೊಳವನಹಳ್ಳಿಯ 10 ಕೆರೆ ಸೇರಿ ಒಟ್ಟು 62ಕೆರೆಗಳಿಗೆ ನೀರು ಹರಿಯಲು 197 ಕಿಮಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಯಲ್ಲಿ 31 ಕೆರೆಗಳ ಅಭಿವೃದ್ದಿಗೆ ಅನುದಾನ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು.
ರಸ್ತೆ ಮತ್ತು ಶಾಲೆ ಕಾಮಗಾರಿಗಳ ಉದ್ಘಾಟನೆ ಹರಿಹರಪ್ಪನಪಾಳ್ಯದ 60 ಲಕ್ಷ ಮತ್ತು ಬಜ್ಜನಹಳ್ಳಿಯ 50 ಲಕ್ಷ ರಸ್ತೆ ಡಾಂಬರೀಕರಣ ಕಾಮಗಾರಿ ಉದ್ಘಾಟನೆ, ಹುಲಿಕುಂಟೆಯಲ್ಲಿ 25ಲಕ್ಷದ ವಿಡಿವಿಕೆ ಕೇಂದ್ರದ ಶಂಕುಸ್ಥಾಪನೆ, 18 ಲಕ್ಷದ ಐ.ಕೆ.ಕಾಲೋನಿಯ ಕರ್ನಾಟಕ ಪಬ್ಲಿಕ್ ಶಾಲೆಯ ದುರಸ್ಥಿ ಕೊಠಡಿಗಳ ನವೀಕರಣಕ್ಕೆ ಚಾಲನೆ ನೀಡಿದ ಸಚಿವರು ನಂತರ ವಿವಿಧ ಕಡೆ ಜನರಿಂದ ಅಹವಾಲು ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಪ್ರಭು.ಜಿ, ಎಸ್ಪಿ ಅಶೋಕ್, ಸಣ್ಣ ನೀರಾವರಿ ಎಇಇ ತಿಪ್ಪೇಸ್ವಾಮಿ, ಎಇ ರಮೇಶ್, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್, ಮುಖಂಡ ಎಂಎನ್‌ಜೆ ಮಂಜುನಾಥ, ವಿನಯ್, ಕೆಂಪರಾಮಯ್ಯ ಸೇರಿದಂತೆ ಇತರರು ಇದ್ದರು.