ಚಿಕ್ಕವಯಸ್ಸಿನ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ : ರಮೇಶ ಪುನರುಚ್ಚಾರ

KannadaprabhaNewsNetwork | Updated : Dec 06 2024, 11:20 AM IST

ಸಾರಾಂಶ

ಬಿ.ಎಸ್‌. ಯಡಿಯೂರಪ್ಪ ಹೋರಾಟದ ಮೂಲಕ ರಾಜಕೀಯದಲ್ಲಿ ದೊಡ್ಡ ಸ್ಥಾನಕ್ಕೇರಿದ್ದಾರೆ. ಆದರೆ, ಚಿಕ್ಕವಯಸ್ಸಿನ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.

 ಬೆಳಗಾವಿ : ಬಿ.ಎಸ್‌. ಯಡಿಯೂರಪ್ಪ ಹೋರಾಟದ ಮೂಲಕ ರಾಜಕೀಯದಲ್ಲಿ ದೊಡ್ಡ ಸ್ಥಾನಕ್ಕೇರಿದ್ದಾರೆ. ಆದರೆ, ಚಿಕ್ಕವಯಸ್ಸಿನ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.

ದೆಹಲಿಯಿಂದ ಗುರುವಾರ ಸಂಜೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ವಿಜಯೇಂದ್ರನಿಂದಾಗಿ ಯಡಿಯೂರಪ್ಪ ಅವರ ಹೋರಾಟ ಮತ್ತು ತ್ಯಾಗಕ್ಕೆ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಭೂ ಕಬಳಿಕೆ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡ ದೆಹಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬಂದಿದ್ದೇವೆ. ತಮ್ಮ ತಂಡದ ಹೋರಾಟವನ್ನು ಜೆಪಿಸಿ ಮುಕ್ತವಾಗಿ ಕೊಂಡಾಡಿದೆ. ಅದು ದೇಶದ ಎಲ್ಲ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಜೆಪಿಸಿ ಸದಸ್ಯರು ಹೇಳಿದ್ದಾರೆ. ತಾವು ನೀಡಿದ ವರದಿ ಜೆಪಿಸಿಯ ಕೆಲಸಕ್ಕೆ ಬಹಳಷ್ಟು ನೆರವಾಗಲಿದೆ ಎಂದಿದ್ದಾರೆ ಅಂತ ಹೇಳಿದರು.

ಸಂಸದ ಗೋವಿಂದ ಕಾರಜೋಳ ಮೂಲಕ ನಾವು ಈಗಾಗಲೇ ವರದಿ ಸಲ್ಲಿಸಿದ್ದೇವೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಮೇಶ ಜಾರಕಿಹೊಳಿ, ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಹುಬ್ಬಳ್ಳಿ, ವಿಜಯಪುರ ಹಾಗೂ ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸಿದರು. ಉಪವಾಸ ಕೈಬಿಟ್ಟು, ಪ್ರವಾಸ ಮಾಡಿ. ನೊಂದ ಜನರನ್ನು ಭೇಟಿಯಾಗಿ ವರದಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು. ಅದಕ್ಕೆ ಜಿಲ್ಲಾ ಪ್ರವಾಸ ಕೈಗೊಂಡೆವು. ಪ್ರವಾಸಕ್ಕೂ ಮುನ್ನ ವಿಜಯೇಂದ್ರ ಹೇಗೆ ವರದಿ ಕೊಡುತ್ತಾರೆ. ಇದರಿಂದಲೇ ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ತಿಳಿಯುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಸಿದರು.

Share this article