ಕನ್ನಡಪ್ರಭ ವಾರ್ತೆ ಹನೂರು
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬದುಕನ್ನು ಹಾಸನಾಗಿಸಲು ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಯೋಜನೆ ರೂಪಿಸಿಕೊಳ್ಳಲಾಗಿದ್ದು ಸಚಿವ ಸಂಪುಟ ಸಭೆಯಲ್ಲಿ ಅನುದಾನ ಸಿಗುವ ಭರವಸೆಯಿದೆ. ಪ್ರಮುಖವಾಗಿ ವಿದ್ಯುತ್ ನೀರಾವರಿ ಯೋಜನೆ ಮತ್ತು ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲಿಯವರೆಗೆ ರೈತರು ಸಹಕರಿಸಬೇಕು ಎಂದು ಶಾಸಕ ಮಂಜುನಾಥ್ ತಿಳಿಸಿದರು.ಲೋಕೋಪಯೋಗಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಹನೂರು ಕ್ಷೇತ್ರ ಭೌಗೋಳಿಕವಾಗಿ 6.5 ಲಕ್ಷ ಹೆಕ್ಟರ್ ಪ್ರದೇಶ ಹೊಂದಿರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಂತ ಹಂತವಾಗಿ ಹನೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಕ್ಷೇತ್ರದ ಮತದಾರರು ಸಹಕಾರ ನೀಡಬೇಕು ಎಂದರು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಗುಂಡಾಲ್ ಜಲಾಶಯ, ರಾಮನ ಗುಡ್ಡೆ ಹುಬ್ಬೆಹುಣಸೆ ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತವಾಗಿತ್ತು ಇದೀಗ ಇರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ 52 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಜಲಾಶಯಗಳಿಗೆ ನೀರು ತುಂಬಿಸುವುದು, ಚಾನಲ್ ದುರಸ್ತಿ ಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಉಡುತರೆ ಹಳ್ಳ ಜಲಾಶಯಕ್ಕೆ ಮುಂದಿನ ದಿನಗಳಲ್ಲಿ ನೀರು ತುಂಬಿಸಲು ಕ್ರಮ ವಹಿಸಲಾಗುವುದು, ಅಲ್ಲಿಯವರೆಗೆ ಮಳೆಯ ನೀರನ್ನು ಸಂರಕ್ಷಣೆ ಮಾಡಿ ರೈತರಿಗೆ ಹನಿ ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾವಿರಾರು ಕೋಟಿ ಅನುದಾನ ನೀಡುವಂತೆ ಈಗಾಗಲೇ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.ಕಳೆದ ಹಲವು ವರ್ಷಗಳಿಂದ ಮಲೆಮಾದೇಶ್ವರ ಬೆಟ್ಟ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯವಿರಲಿಲ್ಲ. 44 ಕೋಟಿ ವೆಚ್ಚದಲ್ಲಿ ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 22 ಕೋಟಿ ವೆಚ್ಚದಲ್ಲಿ ಕಚ್ಚಾ ರಸ್ತೆ ನಿರ‍್ಮಾಣ ಮಾಡಲು ಈಗಾಗಲೇ ಭೂಮಿ ಪೂಜೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
ರೈತರಿಗೆ ಪರಿಹಾರಕ್ಕೆ ಚರ್ಚಿಸುವೆ:ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ 40 ಕಿ.ಮೀ ರೈಲ್ವೆ ಬ್ಯಾರಿಕೇಡ್ ಆಳವಡಿಸಲು ಅನುಮೋದನೆ ಸಿಕ್ಕಿದೆ. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಶೇ.80% ಸಬ್ಸಿಡಿಯಲ್ಲಿ ತಂತಿ ಬೇಲಿ ನಿರ‍್ಮಾಣ ಮಾಡಲು ಸಹಕಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕಾಡುಪ್ರಾಣಿಗಳ ಹಾವಳಿಗೆ ಸಾಕು ಪ್ರಾಣಿಗಳು ಮೃತಪಡುತ್ತಿರುವುದಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸದನದಲ್ಲಿ ಚರ್ಚೆ ನಡೆಸುತ್ತೇನೆ ಸಂಬಂಧಪಟ್ಟ ಅರಣ್ಯ ಇಲಾಖೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸೋಲಾರ್ ವಿದ್ಯುತ್‌ಗೆ ಚಿಂತನೆ:ವಿದ್ಯುತ್ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಹನೂರು ಪಟ್ಟಣದಲ್ಲಿ ಹೆಚ್ಚುವರಿ 222 ಕೆವಿ ಉಪ ಕೇಂದ್ರ ಗಡಿಗ್ರಾಮ, ಹೂಗ್ಯಸೇರಿದಂತೆ, ಎಲ್ಲೇಮಾಳ ಗ್ರಾಮದಲ್ಲಿ ಉಪ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು. 500 ಎಕರೆಯಿಂದ ಸುಮಾರು 10 ಸಾವಿರ ಎಕರೆಯವರೆಗೆ ಸೋಲಾರ್ ಮೂಲಕ ವಿದ್ಯುತ್ ತಯಾರಿಸಲು ಈಗಾಗಲೇ ನಾಲ್ಕು ಕಡೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಯಶಸ್ವಿಯಾದರೆ ರೈತರಿಗೆ ಹೆಚ್ಚಿನ ವಿದ್ಯುತ್ ಅನುಕೂಲ ಸಿಗಲಿದೆ ಎಂದರು.ರೈತರು ಪ್ರಸ್ತಾಪ ಮಾಡಿರುವ ಎಲ್ಲಾ ಸಮಸ್ಯೆಗಳಿಗೆ ನನ್ನದು ಧ್ವನಿ ಇದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಇದುವರೆಗೂ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ಪೋಡುಗಳಾಗದೆ ರೈತರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕಂದಾಯ ಸಚಿವರಿಗೂ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಕ್ಷೇತ್ರಕ್ಕೆ ಇದುವರೆಗೂ 117 ಕೋಟಿ ಅನುದಾನ ಬಂದಿದ್ದು, ಈಗಾಗಲೇ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಈ ಪೈಕಿ ಎರಡು ಸೇತುವೆಯು ಸೇರಿಕೊಂಡಿದೆ. ಮುಂದಿನ ದಿನಗಳಲ್ಲಿ ಎಇಪಿ ಮತ್ತು ಟಿಎಸ್ಪಿ ಯೋಜನೆಯಡಿ ೪೫ ಕೋಟಿ ಅನುದಾನ ಬಂದಿದ್ದು ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಜಲತ್ವ ಸಮಸ್ಯೆಗಳು ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ರೈತರಿಗೆ ವಿದ್ಯುತ್, ನೀರು, ರಸ್ತೆ, ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.ಶಾಸಕ ಮಂಜುನಾಥ್ ಪ್ರತಿಕ್ರಿಯಿಸಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಯಾವುದೆಲ್ಲ ಕಾರ‍್ಯರೂಪಕ್ಕೆ ಬರುತ್ತದೆ ಎಂದು ನೋಡಿಕೊಂಡು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ವಹಿಸುತ್ತೇನೆ ಭರವಸೆ ನೀಡಿದರು.
ಹನೂರಿನಿಂದ ಪಾಲಾರ್ ಗ್ರಾಮದವರೆಗೆ ಕೆ ಶಿಪ್ ರಸ್ತೆ ಕಾಮಗಾರಿ, ನೂತನ ಪ್ರಜಾಸೌಧ ಕಟ್ಟಡ, ತಾಲೂಕು ಪಂಚಾಯಿತಿ ಕಟ್ಟಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಿದ್ದರಾಮಯ್ಯರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.ಕುಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಭರವಸೆ:ಮಾದೇಶ್ವರ ಬೆಟ್ಟದ ತಪಲಿನಲ್ಲಿ ಬರುವ ಇಂಡಿಗನತ್ತ ಹಾಗೂ ತುಳಸಿಕೆರೆ ಮತ್ತು ನಾಗಮಲೆ ಪಡಸಲನಾಥ ಸೇರಿದಂತೆ ವಿವಿಧ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆಯಲ್ಲಿರುವ ತೊಡಕನ್ನು ನಿವಾರಣೆ ಮಾಡಿ ಕ್ರಮ ಕೈಗೊಳ್ಳಲು ಈಗಾಗಲೇ ಗ್ರಾಮಗಳ ಅಭಿವೃದ್ಧಿಗೆ ರಸ್ತೆ ನರ‍್ಮಾಣಕ್ಕೆ 20 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
ಐತಿಹಾಸಿಕ ಕ್ಯಾಬಿನೆಟ್ ಸಭೆ:ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಸಭೆಯ ನಂತರ ಮಲೆ ಮಾದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನರ‍್ಮಾಣ ಮಾಡಲಾಗಿರುವ 376 ಕೊಠಡಿ ಹಾಗೂ ಮಲೆ ಮಹದೇಶ್ವರ ಪ್ರತಿಮೆ ಸ್ಥಳ ಭಾಗದಲ್ಲಿ ಮಾದಪ್ಪನ 20 ಬಗೆಯ ಮ್ಯೂಸಿಯಂ ಸಹ ಉದ್ಘಾಟನೆಗೊಳಿಸಲಿದ್ದಾರೆ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ನಾಲ್ಕು ಸಾವಿರ ಜನ ಭಕ್ತರು ಕುಳಿತು ದಾಸೋಹ ಸವಿಯುವ ಹಾಗೂ ಭಕ್ತರಿಗೆ ಡಾಮಿಟರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹ ಸಂಕುಸ್ಥಾಪನೆ ನೆರವೇರಿಸಿ ಉದ್ಘಾಟನೆಗೊಳಿಸಲಿದ್ದಾರೆ ಹೀಗಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಸಭೆಯಲ್ಲಿ ತಾಲೂಕಿಗೆ ಹೆಚ್ಚಿನ ಪ್ರತಿನಿತ್ಯ ನೀಡುವ ಬರವಸೆ ಇದೆ ಎಂದು ಇದೆ ವೇಳೆಯಲ್ಲಿ ತಿಳಿಸಿದರು
ರೈತ ಮುಖಂಡರಿಂದ ಶಾಸಕರಿಗೆ ಮನವಿ:ವಿವಿಧ ಬೇಡಿಕೆಗಳು ಈಡೇರಿಸುವಂತೆ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ರಾಜ್ಯ ರೈತ ಸಂಘ ಶಾಸಕರಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಇನ್ಸ್‌ಪೆಕ್ಟರ್ ಆನಂದ್ ಮರ‍್ತಿ, ಚಿಕ್ಕರಾಜ ಶೆಟ್ಟಿ, ರಾಜ್ಯರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್, ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷ ರಾಜಾಮಣಿ, ಕೊಳ್ಳೇಗಾಲ ತಾಲೂಕು ಪ್ರಧಾನ ಕಾರ್ಯದರ್ಶಿ ರವೀ ನಾಯ್ಡು, ಗ್ರಾಮ ಘಟಕಗಳ ಅಧ್ಯಕ್ಷರಾದ ಬಸವರಾಜು, ವೆಂಕಟೇಶ್, ಮುತ್ತಣ್ಣ, ಮಾದೇಶ್, ಪಳನಿಶೆಟ್ಟಿ, ಬಾಲಸುಬ್ರಮಣ್ಯ, ಪಚ್ಚೇಗೌಡ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಪೋಂಗುಡಿ ಹಾಜರಿದ್ದರು.