ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ವಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗೆ ಸಂಪುಟ ಒತ್ತಡ

KannadaprabhaNewsNetwork | Updated : Aug 23 2024, 05:24 AM IST

ಸಾರಾಂಶ

 ಎಚ್.ಡಿ.ಕುಮಾರಸ್ವಾಮಿ,  ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಮನವಿ  ಶೀಘ್ರವಾಗಿ ಇತ್ಯರ್ಥಪಡಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ತೀರ್ಮಾನವನ್ನು  ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

  ಬೆಂಗಳೂರು :  ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು, ಪ್ರತಿಪಕ್ಷಗಳ ನಾಯಕರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಬಾಕಿ ಇರುವ ಅರ್ಜಿಗಳ ಇತ್ಯರ್ಥಕ್ಕೆ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ. ತನ್ಮೂಲಕ ಪ್ರಾಸಿಕ್ಯೂಷನ್‌ಗೆ ಒತ್ತಡ ಹೇರುವ ಪ್ರಯತ್ನ ಮಾಡಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, ‘ರಾಜ್ಯಪಾಲರ ಬಳಿ ಕುಮಾರಸ್ವಾಮಿ, ಜೊಲ್ಲೆ, ರೆಡ್ಡಿ ಮತ್ತು ನಿರಾಣಿ ಅವರ ಕುರಿತಾಗಿ ಅನುಮೋದನೆಗಾಗಿ ಬಾಕಿಯಿರುವ ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲು ಹಾಗೂ ನ್ಯಾಯದ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯಪಾಲರಿಗೆ ಸಂವಿಧಾನದ 163ನೇ ವಿಧಿಯನ್ವಯ ನೆರವು ಮತ್ತು ಸಲಹೆ ನೀಡಲು ಸಂಪುಟ ತನ್ನ ಅನುಮೋದನೆ ನೀಡಿದೆ’ ಎಂದು ಹೇಳಿದರು.

ಸಂವಿಧಾನದ 163 ವಿಧಿ ಅನ್ವಯ ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶವಿದೆ. ಅದರಂತೆ ಈ 4 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು.ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಹಲವು ಅನುಮೋದನಾ ಅರ್ಜಿಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿದೆ.

ಈ ಅರ್ಜಿಗಳ ತನಿಖೆ ಬಳಿಕ ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿ ಆಕ್ಟ್‌) ಸೆಕ್ಷನ್‌ 17-ಎ ಹಾಗೂ ಭಾರತೀಯ ನಾಗರಿಕ ದಂಡ ಸಂಹಿತೆ 218ರ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಅನುಮೋದನೆಗಾಗಿ ಲೋಕಾಯುಕ್ತ ಪೊಲೀಸರು ಅನುಮೋದನೆ ಕೋರಿದ್ದಾರೆ ಎಂದು ಪಾಟೀಲ್ ತಿಳಿಸಿದರು.

ಈ ಪೈಕಿ ಕುಮಾರಸ್ವಾಮಿ ಹಾಗೂ ರೆಡ್ಡಿ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಚಾರ್ಜ್‌ಶೀಟ್‌ ಸಿದ್ಧಪಡಿಸಿದ್ದಾರೆ. ಇನ್ನು ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ ನಿರಾಣಿ ಪ್ರಕರಣದಲ್ಲಿ ತನಿಖೆ ನಡೆಸಿ ತನಿಖೆಯಲ್ಲಿ ಆರೋಪ ಸಾಬೀತಾಗಿದ್ದು, ಅದರ ಆಧಾರದ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮೋದನೆ ಕೇಳಿದ್ದಾರೆ ಎಂದು ಹೇಳಿದರು.

ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಸ್ವೀಕರಿಸಲು ಬಾಧ್ಯಸ್ಥರಾಗಿದ್ದು, ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ ಎಂದರು.

ದ್ವೇಷದ ಕ್ರಮ ಅಲ್ಲ:ಇದು ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ನ ದ್ವೇಷದ ಕ್ರಮವೇ ಎಂಬ ಪ್ರಶ್ನೆಗೆ, ‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದು, ತರಾತುರಿಯಲ್ಲಿ ಸಂಜೆಯೊಳಗಾಗಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಆದರೆ ಈ ನಾಲ್ಕು ಪ್ರಕರಣಗಳು ಭಿನ್ನವಾಗಿದ್ದು, ತನಿಖೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಗಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ಬಗ್ಗೆ ತಪ್ಪು ಭಾವನೆ ಬರಬಾರದು ಮತ್ತು ಯಾವುದೇ ಗೊಂದಲ ಆಗಬಾರದು ಎಂದು ಸಚಿವ ಸಂಪುಟ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ’ ಎಂದು ಸಮರ್ಥಿಸಿಕೊಂಡರು.ಪ್ರತ್ಯೇಕ ಬಾಕ್ಸ್...

ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಗಣಿ ಕೇಸು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿದ್ದಾಗ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಗೆ 2007ರ ಅ.6 ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿರುವ ಆರೋಪವಿದೆ. ಗುತ್ತಿಗೆ ನೀಡುವಾಗ ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು ಮಂಜೂರು ಮಾಡಿದ್ದರು ಎನ್ನಲಾಗಿದೆ.

ಈ ಅಕ್ರಮದ ಕುರಿತಾಗಿ ಎಫ್‌ಐಆರ್ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆ ನಂತರ ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್ ಹಾಕಲಾಗಿತ್ತು. ಬಳಿಕ ಲೋಕಾಯುಕ್ತ ಎಡಿಜಿಪಿಯವರು 2023ರ ನ.21 ರಂದು ಖುದ್ದಾಗಿ ಪತ್ರ ಬರೆದು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದ್ದರು.

ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ ಸಲ್ಲಿಸಿದ ಆರೋಪ ಪಟ್ಟಿ ಕುರಿತು ರಾಜ್ಯಪಾಲರು ಜು.29 (2024)ರಂದು ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಎಸ್‌ಐಟಿಯು ಆ.16 ರಂದು ವಿಸ್ತೃತ ಸ್ಪಷ್ಟೀಕರಣ ನೀಡಿದೆ. ಹಿಗಿದ್ದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ ಎಂಬುದು ರಾಜ್ಯಪಾಲರ ಮೇಲಿನ ಆರೋಪ.ಬಾಕ್ಸ್..

ಮುರುಗೇಶ್ ನಿರಾಣಿ ವಿರುದ್ಧದ 3-ಡಿ ವಿಡಿಯೋ ಕೇಸು

ಕೈಗಾರಿಕಾ ಮಾಜಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನವೆಂಬರ್-2022ರಂದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಸಮ್ಮೇಳನ ನಡೆಸಲಾಗಿತ್ತು.

ಇನ್‌ವೆಸ್ಟ್ ಕರ್ನಾಟಕವನ್ನು ಪ್ರಚಾರ ಮಾಡಲು 2 ನಿಮಿಷಗಳ 3-ಡಿ ವಿಡಿಯೋವನ್ನು ಚಿತ್ರೀಕರಿಸಲು ಅರ್ಹತೆ ಇಲ್ಲದ 5 ಸಂಸ್ಥೆಗೆ ಗುತ್ತಿಗೆ ನೀಡಿ, ಬರೋಬ್ಬರಿ 4.08 ಕೋಟಿ ರು. ಬೃಹತ್‌ ಮೊತ್ತಕ್ಕೆ ಕಾರ್ಯಾದೇಶ ನೀಡಿ ಹಣ ಬಿಡುಗಡೆ ಮಾಡಿ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖಾ ವರದಿ ಆಧಾರದ ಮೇಲೆ 2024ರ ಫೆ.26 ರಂದು ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೇಳಲಾಗಿದೆ. ಬಾಕ್ಸ್..ಜನಾರ್ದನ ರೆಡ್ಡಿ ಮೇಲಿನ ಅಕ್ರಮ ಆಸ್ತಿ ಕೇಸು

ಜನಾರ್ದನ ರೆಡ್ಡಿ ಕುಟುಂಬ ವಿರುದ್ದ 8.06.2006 ರಿಂದ 5.09.2011 ರವರೆಗಿನ ಪರಿಶೀಲನಾ ಅವಧಿಯಲ್ಲಿ ಆದಾಯಕ್ಕಿಂತ 25.27% (65,30,57,024 ರು.) ರಷ್ಟು ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿತ್ತು.ಈ ಅವಧಿಯಲ್ಲಿ ಜನಾರ್ದನ ರೆಡ್ಡಿ ಸಚಿವರಾಗಿದ್ದು, ಭ್ರಷ್ಟಾಚಾರ ಪ್ರತಿಬಂಧಕ 1988 ರ ಕಲಂ 19(1) (ಬಿ) ರಡಿಯಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಮಂಜೂರು ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರು ಮನವಿ ಮಾಡಿದ್ದರು.

ಈ ಸಂಬಂಧ ತನಿಖಾಧಿಕಾರಿ ಮಾ.7, 2024ಗೆ ಅಂತಿಮ ವರದಿ ನೀಡಿದ್ದರು. ಮೇ 13, 2024ರಂದು ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.ಬಾಕ್ಸ್‌..

ಶಶಿಕಲಾ ಜೊಲ್ಲೆ ‘ಮೊಟ್ಟೆ ಹಗರಣ’

2021ರ ಡಿ.9 ರಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ದ ಮೊಟ್ಟೆ ಅಕ್ರಮ ಟೆಂಡರ್ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತರು ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲೂ ಪ್ರಾಥಮಿಕ ತನಿಖೆ ವರದಿ ಇದೆ. ಅದರಲ್ಲಿ ಶಶಿಕಲಾ ಜೊಲ್ಲೆ ಮೇಲಿನ ಆರೋಪ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಅದರ ಆಧಾರದ ಮೇಲೆ ವಿಚಾರಣೆಗೆ ಅನುಮತಿ ಕೇಳಲಾಗಿದೆ.

Share this article