ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಬದಲಾದರೆ ಹಳಬರು ಹೋಗಿ, ಹೊಸ ಸಚಿವರು ಬಂದೇ ಬರುತ್ತಾರೆ. ಈ ಮುಂಚೆಯೇ 30 ತಿಂಗಳ ಬಳಿಕ ಮಾಡಬೇಕು ಅಂತಾ ಚರ್ಚೆ ನಡೆಯುತ್ತಿತ್ತು. ಈಗ ಅದು ಬಹುಶಃ ಅಂತಿಮ ಹಂತಕ್ಕೆ ಬಂದಿರಬಹುದು. ಬೆಳಗಾವಿಯಿಂದ ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ, ಸಂಪುಟದಿಂದ ಯಾರನ್ನು ಕೈ ಬಿಡುತ್ತಾರೆ ಎಂಬುದು ಪಕ್ಷಕ್ಕೆ ಬಿಟ್ಟಿದ್ದು ಎಂದರು. ಹಿರಿಯ ಸಚಿವರು ತಮ್ಮ ಸ್ಥಾನ ಬಿಟ್ಟು ಕೊಡುವ ಬಗ್ಗೆ ದೆಹಲಿಯಲ್ಲಿ ಹೈಕಮಾಂಡ್ ಹಂತದಲ್ಲಿ ಚರ್ಚೆ ಆಗಿರಬಹುದು. ಆದರೆ, ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ. ಹಾಗಾಗಿ, ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ನಿರ್ಧಾರವನ್ನು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ. ಸಂಪುಟದಿಂದ ಕೈ ಬಿಟ್ಟವರು ಪಕ್ಷದ ಕೆಲಸಕ್ಕೆ ಹೋಗಲೇಬೇಕಾಗುತ್ತದೆ. ಮಂತ್ರಿ ಆಗಿ ಉಳಿದವರು ಪಕ್ಷದ ಕೆಲಸ ಮಾಡಬೇಕಾಗುತ್ತದೆ ಎಂದರು.ಯಾವ ಮಾನದಂಡದ ಆಧಾರದ ಮೇಲೆ ಕೆಲ ಸಚಿವರನ್ನು ಕೈ ಬಿಡುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಮಾನದಂಡ ವಿಧಿಸುವವರು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡುತ್ತಾರೆ ಎಂದರು. ನಿಮ್ಮನ್ನು ಸಂಪುಟದಿಂದ ಕೈ ಬಿಟ್ಟು ರಾಜ್ಯಾಧ್ಯಕ್ಷ ಸ್ಥಾನ ನೀಡುವ ಚರ್ಚೆ ಏನಾದರೂ ಆಗಿದೆಯಾ ಎಂಬ ಪ್ರಶ್ನೆಗೆ, ಅದನ್ನು ನೀವೇ ಇಲ್ಲಿ ಹೇಳಿದರೆ ನನ್ನ ಬಳಿ ಉತ್ತರ ಇಲ್ಲ. ಇನ್ನು ಪಕ್ಷ ಸಂಘಟನೆಯಲ್ಲಿ ನಾನು ತೊಡಗಬೇಕು ಎಂಬ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.
ಸಂಪುಟ ಪುನರ್ ರಚನೆ ಆದರೆ ಸರ್ಕಾರಕ್ಕೆ ಎಷ್ಟರಮಟ್ಟಿಗೆ ಅನೂಲಕೂಲ ಆಗಬಹುದು ಎಂಬ ಪ್ರಶ್ನೆಗೆ, ಈ ಮುಂಚೆಯೇ ಪುನರ್ ರಚನೆ ಚರ್ಚೆ ಕೇಳಿ ಬರುತ್ತಿತ್ತು. ನಾವು ಅರ್ಧ ಮಾಡಬೇಕು. ನೀವು ಅರ್ಧ ಮಾಡಬೇಕು ಅನ್ನು ಪಾಲಿಸಿಯಲ್ಲಿ ಮಾಡಬಹುದು. ಈ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.ಬೆಳಗಾವಿ ಜಿಲ್ಲೆಯಿಂದ ಯಾರೆಲ್ಲಾ ಮಂತ್ರಿ ಆಗಬಹುದು ಎಂಬುದಕ್ಕೆ ನಮ್ಮಲ್ಲಿ ನಾಲ್ಕು, ಐದು ಬಾರಿ ಶಾಸಕರಾದ ಹಿರಿಯರು ಬಹಳಷ್ಟು ಜನರಿದ್ದಾರೆ. ಹೈಕಮಾಂಡ್ ಯಾವ ರೀತಿ ನಿರ್ಧಾರ ಮಾಡುತ್ತದೆ ಅವರಿಗೆ ಬಿಟ್ಟಿದ್ದು. ನಾವು ಇವರೇ ಆಗುತ್ತಾರೆ ಅಂತಾ ಹೇಳುವುದು ಕಷ್ಟ ಆಗುತ್ತದೆ ಎಂದ ಅವರು, ಹಿಂದೆ ಬೆಳಗಾವಿ ಜಿಲ್ಲೆಯ ಐವರು ಸಚಿವರಿದ್ದರು ಎಂಬ ಮಾಧ್ಯಮಗಳ ಪ್ರಶ್ನೆಗೆ ಆಗ ಯಾವುದೇ ನಿರ್ಬಂಧ ಇರಲಿಲ್ಲ. ಈಗ 34ಕ್ಕಿಂತ ಹೆಚ್ಚು ಸಚಿವರನ್ನು ಮಾಡಲು ಬರುವುದಿಲ್ಲ. ಎಷ್ಟೇ ಹಿರಿತನ ಇದ್ದರೂ ಸಂಪುಟದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸತೀಶ ಉತ್ತರಿಸಿದರು.
ಸಚಿವ ಸ್ಥಾನ ಸಿಗುವ ಬಗ್ಗೆ ಪರೋಕ್ಷವಾಗಿ ಲಕ್ಷ್ಮಣ ಸವದಿ ಮಾತನಾಡಿರುವುದಕ್ಕೆ ಎಲ್ಲರೂ ಬೇಡಿಕೆ ಇಡುತ್ತಾರೆ. ಯಾಕೆಂದರೆ ನಮ್ಮ ಜಿಲ್ಲೆ ಸೇರಿ ಬೇರೆ ಜಿಲ್ಲೆಗಳಲ್ಲೂ ಹಿರಿಯ ಶಾಸಕರು ಬಹಳಷ್ಟಿದ್ದಾರೆ. ಅಂತಿಮವಾಗಿ ಯಾರಿಗೆ ಲಕ್ಷ್ಮೀ ಒಲಿಯುತ್ತಾಳೆ ಅಂತಾ ನೋಡೋಣ ಎಂದರು.ಯತೀಂದ್ರ ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿರುವುದಕ್ಕೆ ಅಹಿಂದ ವಿಚಾರಕ್ಕೆ ಹೇಳಿದ್ದಾರೆ ಹೊರತು ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಹೇಳಿಲ್ಲ. ಹಾಗಾಗಿ, ಆ ರೀತಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅಹಿಂದ ಸಂಘಟನೆಗೂ ಪಕ್ಷಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ. ಆ ವಿಷಯ ಬೇರೆ ಎಂದು ಸತೀಶ ಜಾರಕಿಹೊಳಿ ಸಮಜಾಯಿಷಿ ನೀಡಿದರು.
ಅಹಿಂದ ನಾಯಕ ಬೇರೆ, ಸಿಎಂ ಪೋಸ್ಟ್ ಬೇರೆ: ಸತೀಶಮಂತ್ರಿ ಮಂಡಲ ಬದಲಾವಣೆ ವಿಚಾರ ಬಗ್ಗೆ ನಾನೂ ಪತ್ರಿಕೆಗಳಲ್ಲಿ ನೋಡಿದ್ದೇನೆ. ಯತೀಂದ್ರ ಅವರು ಮುಖ್ಯಮಂತ್ರಿ ಎನ್ನುವ ಮಾತು ಆಡಿಲ್ಲ. ಆದರೆ, ಅಹಿಂದ ನಾಯಕರೆಂದು ಹೇಳಿದ್ದಾರೆ. ಅಹಿಂದ ನಾಯಕ ಬೇರೆ, ಸಿಎಂ ಪೋಸ್ಟ್ ಬೇರೆ. ಸಿಎಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಇರುತ್ತಾರೆ. ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಯತೀಂದ್ರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನಾನೇನು ಈ ಬಗ್ಗೆ ಮಾತನಾಡುವುದಿಲ್ಲ ಎಂದರು. ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಎಲ್ಲಾ ಜಿಲ್ಲೆ ನಾಯಕರು ಕೂಡಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಇನ್ನೂ ಅಂತಿಮವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.ಇದೇ ವೇಳೆ ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿ ಇಲ್ಲ ಶಾಂತಿ ಇದೆ ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹಮ್ಮದ ಹೇಳಿದರು.