ಮಂಗಳೂರು: ಉಳ್ಳಾಲ ನಗರಾದ್ಯಂತ 186 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
110 ಕೆವಿಗೆ ಮೇಲ್ದರ್ಜೆಗೆ: ಉಳ್ಳಾಲ ಕ್ಷೇತ್ರದಲ್ಲಿ ಮುಂದಿನ 30 ವರ್ಷಗಳವರೆಗೆ ಯಾವ ಯೋಜನೆ, ಕೈಗಾರಿಕೆಗಳು ಬಂದರೂ ವಿದ್ಯುತ್ ಅಭಾವ ಉಂಟಾಗದಂತೆ ಈಗಿರುವ 32 ಕೆವಿ ವಿದ್ಯುತ್ ಸಾಮರ್ಥ್ಯವನ್ನು 110 ಕೆವಿಗೆ ಪರಿವರ್ತಿಸಲಾಗುವುದು, ಈ ಕಾಮಗಾರಿಗೆ ಟೆಂಡರ್ ಆಗಿದೆ ಎಂದರು.
ಅತಿ ಉದ್ದದ ಸೇತುವೆ: ಉಳ್ಳಾಲದ ಕೋಟೆಪುರದಿಂದ ಮಂಗಳೂರಿನ ಬೋಳಾರದವರೆಗೆ 1.5 ಕಿಮೀ ಉದ್ದದ ಸೇತುವೆ ನಿರ್ಮಾಣಕ್ಕೆ ಎಲ್ಲ ಹಂತಗಳ ಅನುಮೋದನೆ ದೊರೆತು ಇದೀಗ ಟೆಂಡರ್ ಕರೆಯಲು ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಹೊರತುಪಡಿಸಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮವನ್ನು ಸಂಪರ್ಕಿಸುವ ಇಷ್ಟು ಉದ್ದದ ಸೇತುವೆ ಎಲ್ಲೂ ಇಲ್ಲ. ಸಮುದ್ರಕ್ಕೆ ಸಮಾನಾಂತರವಾಗಿ ನಿರ್ಮಾಣವಾಗುವ ಈ ಸೇತುವೆ ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಜತೆಗೆ ವಾಹನ ದಟ್ಟಣೆ ನಿವಾರಣೆಗೂ ಇದು ಕೊಡುಗೆ ನೀಡಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.ಈ ಸೇತುವೆ ಅಡಿಭಾಗದ ಸೌಂದರ್ಯೀಕರಣ, ವಿವಿಧ ಪ್ರವಾಸೋದ್ಯಮ ಆಕರ್ಷಣೆಯ ಕಾಮಗಾರಿಗಳನ್ನು ಕೈಗೊಳ್ಳಲು 30 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.ಸಜಿಪ- ತುಂಬೆ ಸೇತುವೆ: ಉಳ್ಳಾಲ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ತುಂಬೆ, ಮೇರಮಜಲು ಗ್ರಾಮಗಳೂ ಕ್ಷೇತ್ರಕ್ಕೆ ಸೇರಿವೆ. ಆದರೆ ಅಲ್ಲಿಗೆ ಹೋಗಬೇಕಾದರೆ ಸುತ್ತುಬಳಸಿ ಹೋಗಬೇಕಾಗಿರುವುದರಿಂದ 62 ಕೋಟಿ ರು. ವೆಚ್ಚದಲ್ಲಿ ಸಜಿಪದಿಂದ ತುಂಬೆವರೆಗೆ ಸೇತುವೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಮಂಜೂರಾತಿ ಪಡೆದು ಟೆಂಡರ್ ಆಗಿದೆ ಎಂದು ಮಾಹಿತಿ ನೀಡಿದರು.
ಮುಡಿಪು- ಬಾಕ್ರಬೈಲ್ ರಸ್ತೆ ಅಭಿವೃದ್ಧಿಗೆ 15 ದಿನಗಳ ಹಿಂದೆಯೇ ಶಂಕುಸ್ಥಾಪನೆ ಮಾಡಲಾಗಿದೆ. ಮುಡಿಪುನಿಂದ ಕೇರಳ ಗಡಿಯವರೆಗೆ ಎಲ್ಲೆಲ್ಲಿ ಮೋರಿ, ಚರಂಡಿ, ರಸ್ತೆ ಲೆವೆಲಿಂಗ್ ಮಾಡಬೇಕು ಎಂಬುದನ್ನು ಗುರುತಿಸಲಾಗಿದ್ದು, ಕೆಲಸ ಆರಂಭವಾಗಿದೆ. ಆದರೆ ಕೆಲವರಿಗೆ ಈ ವಿಷಯ ಗೊತ್ತಿಲ್ಲದೆ ಪ್ರತಿಭಟನೆ ನಡೆಸಿದ್ದಾರೆ. ಶೀಘ್ರ ಈ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.ಅಬ್ಬಕ್ಕ, ಬ್ಯಾರಿ ಭವನಕ್ಕೆ ಶೀಘ್ರ ಶಂಕು: ತೊಕ್ಕೊಟ್ಟಿನಲ್ಲಿ 8 ಕೋಟಿ ರು.ಗಳ ರಾಣಿ ಅಬ್ಬಕ್ಕ ಭವನ ಹಾಗೂ ಕೊಣಾಜೆಯಲ್ಲಿ 6 ಕೋಟಿ ರು. ವೆಚ್ಚದ ಬ್ಯಾರಿ ಭವನಕ್ಕೆ ಫೆ.15ರೊಳಗೆ ಶಂಕುಸ್ಥಾಪನೆ ನಡೆಸಲಾಗುವುದು.