ಹಾವೇರಿ: ಕೃಷ್ಣಾ ಹಾಗೂ ಕಾವೇರಿ ನದಿ ಜೋಡಣೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಲು ರಾಜ್ಯ ಸರ್ಕಾರ ಬಿಡಬಾರದು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವಪಕ್ಷ ಸಭೆ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಗ್ರಹಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಕೃಷ್ಣಾ ಹಾಗೂ ಕಾವೇರಿ ಜಲಾನಯನದಿಂದ ನಮಗೆ ಹೆಚ್ಚು ನೀರು ಸಿಗುತ್ತದೆ. ನಮ್ಮ ನಿಲುವನ್ನು ಗಟ್ಟಿಯಾಗಿ ಹೇಳಬೇಕು. ಕಾವೇರಿ, ಗೋದಾವರಿ, ಕೃಷ್ಣಾ ಮಹಾನದಿ ನಾಲ್ಕು ನದಿಗಳ ಜೋಡಣೆ ಮಾಡಿದರೆ, ಆಯಾ ರಾಜ್ಯಗಳಿಗೆ ಪಾಲು ಹಂಚಬೇಕು ಎಂಬ ನೀತಿ ಇತ್ತು.ಮೊದಲನೇ ಡಿಪಿಆರ್ ಮಾಡಿದಾಗ ನಮ್ಮ ರಾಜ್ಯಕ್ಕೆ 130 ಟಿಎಂಸಿ ನೀರು ಸಿಗುತ್ತದೆ ಎಂದಿತ್ತು. ಎರಡನೇ ಬಾರಿಗೆ ಮತ್ತೆ ಕಡಿಮೆ ಮಾಡಿದರು. ಹೀಗಾಗಿ ನಾನು ನೀರಾವರಿ ಸಚಿವನಿದ್ದಾಗ ಅದನ್ನು ವಿರೋಧಿಸಿದ್ದೆ. ನದಿ ಜೋಡಣೆಯಿಂದ ಕೇವಲ ಆಂಧ್ರ ಹಾಗೂ ತಮಿಳುನಾಡಿಗೆ ಮಾತ್ರ ಹೆಚ್ಚು ಪ್ರಯೋಜನ ಆಗುತ್ತದೆ. ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡಬಾರದು ಎಂದರು.ಕೇಂದ್ರದ ಸಮೀಕ್ಷೆ ಅಂತಿಮ: ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿ ನಾಮ್ ಕೆ ವಾಸ್ತೆ ನಡೆಸುತ್ತಿರುವ ಕುರಿತು ಕೇಳಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ವ್ಯವಸ್ಥಿತ ಜನಗಣತಿ ಮಾಡಲು ತೀರ್ಮಾನಿಸಿದೆ. ಅದರಲ್ಲೇ ಜಾತಿಗಣತಿ ಮಾಡಬೇಕೆಂದು ತಿಳಿಸಿದ್ದಾರೆ. ಅದೇ ಅಂತಿಮವಾಗುವುದು. ಆಗ ಸಿಎಂ ಸಿದ್ದರಾಮಯ್ಯನವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಸಮೀಕ್ಷೆ ಮಾಡುತ್ತೇವೆಂದರು. ಆದರೆ ಜಾತಿಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲವೆಂದು ಗೊತ್ತಾದಾಗ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಎಂಬ ಹೆಸರಿನಲ್ಲಿ ಬದಲಾವಣೆ ಮಾಡಿದರು ಎಂದರು.ಬ್ಯಾಲೆಟ್‌ನಲ್ಲೂ ಲೋಪ ಇದೆ: ಇವಿಎಂ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು136 ಸ್ಥಾನ ಗೆದ್ದಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಬ್ಯಾಲೆಟ್ ಪೇಪರ್ ಪದ್ಧತಿ ಅಳವಡಿಕೆಗೆ ನಿರ್ಧರಿಸಿದೆ. ಬ್ಯಾಲೆಟ್ ಪೇಪರ್‌ನಲ್ಲಿಯೂ ಹಲವಾರು ಲೋಪಗಳಿವೆ. ಬ್ಯಾಲೆಟ್‌ನಲ್ಲಿ ಒಬ್ಬ ಅಭ್ಯರ್ಥಿ ಮತಗಳ ಜತೆ ಇನ್ನೊಬ್ಬ ಸೋತ ಅಭ್ಯರ್ಥಿ ಮತ ಸೇರಿಸಿ ಎಣಿಸಿದ್ದ ಉದಾಹರಣೆಗಳೂ ಇದೆ. ಈ ವಿಚಾರದ ಕುರಿತು ಚರ್ಚೆಯಾಗಬೇಕು ಎಂದರು.