ಮಾಡಾಳು: ಇಲ್ಲಿನ ಮೂಲಸ್ಥಾನ ಗೌರಮ್ಮನ ನೂತನ ದೇವಾಲಯಕ್ಕೆ ಆಗಮಿಸಿದ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ದೇವಾಲಯದ ಆವರಣದಲ್ಲಿ ದಸರಾ ಮಹೋತ್ಸವ ನಡೆಸುವಂತೆ ಭಕ್ತ ವೃಂದಕ್ಕೆ ಕರೆ ನೀಡಿದರು. ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಇದೇ ಪ್ರಥಮ ಬಾರಿಗೆ ದೇವಾಲಯದಲ್ಲಿ ದಸರಾ ಮಹೋತ್ಸವ ಆಚರಣೆಯನ್ನು ನಡೆಸಬೇಕೆಂದು ಕರೆ ನೀಡಿದರು. ಅ. 20ರಂದು ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರನ್ನು ಪುಷ್ಪ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಂಗಳ ಕರಡೆ ವಾದ್ಯದೊಂದಿಗೆ ದೇವಾಲಯದ ಆವರಣದಲ್ಲಿ ಭಕ್ತರೊಡಗೂಡಿ ಉತ್ಸವ ನಡೆಸಲಾಗುವುದು. ನಂತರ ದೇವಾಲಯದ ಮುಂಭಾಗದಲ್ಲಿ ಸಿದ್ಧಗೊಂಡಿರುವ ಕಂಬನ್ನು ಛೇದಿಸಿ ಬನ್ನಿ ಕಡಿಯಲಾಗುವುದು. ಈ ಸಂದರ್ಭದಲ್ಲಿ ಕೋಡಿಮಠದ ಏಜೆಂಟರಾದ ಮಹಾದೇವಪ್ಪನವರು, ಗ್ರಾಮದ ನಂಜುಂಡ ಶೆಟ್ರು ಮತ್ತು ದೇವಾಲಯದ ಮಂಡಳಿಯ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಾರನಹಳ್ಳಿ, ಅಣ್ಣಾಯಕನಹಳ್ಳಿ, ಶಶಿವಾಳ, ಬೊಮ್ಮಸಮುದ್ರ, ಕಡಲಮಗೆ, ಕಿತ್ತನಕೆರೆ, ಪಿ ಹೊಸಹಳ್ಳಿ, ಕೆ. ಶಂಕರನಹಳ್ಳಿ, ವೈಜಿ ಹಳ್ಳಿ ಮುಂತಾದ ಗ್ರಾಮದ ಭಕ್ತರು ಇದ್ದರು.