ಕನ್ನಡಪ್ರಭ ವಾರ್ತೆ ಬೀದರ್
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳದಕೇರಿ (ಕೆ) ಗ್ರಾಮದ ಸ.ನಂ 130ರ ದಾಖಲೆಗಳನ್ನು ಬಳಸಿಕೊಂಡು ಹಳ್ಳದಕೇರಿ (ಜೆ) ವ್ಯಾಪ್ತಿಯ ಸ.ನಂ 12ಕ್ಕೆ ಸಂಬಂಧಿಸಿದ ದೇವಸ್ಥಾನದ ಸುಮಾರು ಮೂರು ಎಕರೆ 24 ಗುಂಟೆ ಜಮೀನನ್ನು ಕಬಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಕಳೆದ 26 ವರ್ಷಗಳಿಂದ ಈ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿವಾದ ನಡೆಯುತ್ತಿದೆ. ಬೀದರ್ ನ್ಯಾಯಾಲಯ ಹಾಗೂ ಹೈಕೋರ್ಟ್ನಲ್ಲಿ 7 ಪ್ರಕರಣಗಳ ವಿಚಾರಣೆ ನಡೆದಿದ್ದು, ಎಲ್ಲದರಲ್ಲಿ ನಮ್ಮದೆ ಜಯ ಆಗಿದೆ. ಆದರೂ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಇತ್ತೀಚೆಗೆ ಜೆಸಿಬಿ ಯಂತ್ರಗಳ ಮೂಲಕ ಜಮೀನನ್ನು ಸಮತಟ್ಟುಗೊಳಿಸಲಾಗಿದೆ. ಅಲ್ಲದೆ, ಜಾಗದಲ್ಲಿ ರಸ್ತೆ ಹಾಗೂ ನಿವೇಶನಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಆ ಜಾಗದಲ್ಲಿ ನಾಲ್ಕು ಮನೆಗಳು ಸಹ ಆಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.ದೇವಸ್ಥಾನದ ಜಮೀನಿಗೆ ಸಂಬಂಧಿಸಿದ ಅಧಿಕೃತ ಪಹಣಿ, ಗ್ರಾಮ ನಕ್ಷೆ ಹಾಗೂ ಇತರ ದಾಖಲೆಗಳು ಲಭ್ಯವಿದ್ದರೂ, ಬೇರೆ ಸರ್ವೆ ನಂಬರ್ಗಳ ದಾಖಲೆಗಳನ್ನು ತೋರಿಸಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಮುಂದಾಗಿರುವುದು ಖಂಡನೀಯ. ಕಂದಾಯ ಇಲಾಖೆ ಹಾಗೂ ಭೂ ದಾಖಲೆಗಳ ಅಧಿಕಾರಿಗಳು ಮೂಲ ದಾಖಲೆಗಳನ್ನು ಪರಿಶೀಲಿಸಿ ನೈಜ ಗಡಿಗಳನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.
ವಿವಾದಿತ ಜಮೀನಿನ ದಾಖಲೆಗಳನ್ನು ತಿರುಚಿರುವ ಹಾಗೂ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಪೂಜೆಗೆ ಅಡ್ಡಿ; ರಾಮಚಂದ್ರರಾವ್ ಆರೋಪ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಭಾಗ್ಯವಂತಿ ದೇವಿ ಮಂದಿರದ ಪೂಜಾರಿ ರಾಮಚಂದ್ರರಾವ್, ದೇವಸ್ಥಾನದ ಜಾಗದ ವಿವಾದದಿಂದಾಗಿ ಭಕ್ತರು ಹಾಗೂ ಪೂಜಾರಿ ಆತಂಕದಲ್ಲಿ ಜೀವನ ನಡೆಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಮಾಜ ಸೇವಕ ಸಂಗಯ್ಯ ಗಾದಾ ಮಾತನಾಡಿದರು.