700ಕ್ಕೂ ಅಧಿಕ ಅಂಗವಿಕಲರಿಗೆ ಕೃತಕ ಕೈ-ಕಾಲು ಜೋಡಣೆ ಶಿಬಿರ

KannadaprabhaNewsNetwork |  
Published : Oct 26, 2026, 02:15 AM IST
ಬಳ್ಳಾರಿಯ ಕ್ಲಾಸಿಕ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಸನ್ಮಾರ್ಗ ಗೆಳೆಯರ ಬಳಗ ಹಾಗೂ ರಾಜಸ್ಥಾನದ ಉದಯಪುರದ ನಾರಾಯಣ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಕೃತಕ ಕೈ-ಕಾಲು ಜೋಡಣೆ ಶಿಬಿರಕ್ಕೆ ಎಸ್ಪಿ ಸುಮನ್ ಡಿ.ಪೆನ್ನೇಕರ್ ಅವರು ಭೇಟಿ ನೀಡಿದರು.  | Kannada Prabha

ಸಾರಾಂಶ

ಕೈ-ಕಾಲು ಕಳೆದುಕೊಂಡು ಇತರರ ನೆರವಿನೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಶಿಬಿರವು ಮಾನವೀಯ ಸೇವೆಗೆ ಸಾಕ್ಷಿಯಾಯಿತು.

ಬಳ್ಳಾರಿ: ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಕೈ-ಕಾಲು ಕಳೆದುಕೊಂಡು ಸಂಕಷ್ಟದ ಬದುಕು ನಡೆಸುತ್ತಿರುವ ಅಂಗವಿಕಲರಿಗೆ ನೆರವಾಗುವ ಉದ್ದೇಶದಿಂದ ನಗರದ ಸನ್ಮಾರ್ಗ ಗೆಳೆಯರ ಬಳಗ ಹಾಗೂ ರಾಜಸ್ಥಾನದ ಉದಯಪುರದ ನಾರಾಯಣ ಸೇವಾ ಸಂಸ್ಥೆ ಸಹಯೋಗದಲ್ಲಿ ಬೃಹತ್ ಕೃತಕ ಕೈ-ಕಾಲು ಜೋಡಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನಗರದ ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ 700ಕ್ಕೂ ಅಧಿಕ ಅಂಗವಿಕಲರು ಆಗಮಿಸಿದ್ದು, ಕೃತಕ ಕೈ-ಕಾಲು ಜೋಡಣೆ ಕಾರ್ಯ ಭರದಿಂದ ನಡೆಯಿತು.

ಕೈ-ಕಾಲು ಕಳೆದುಕೊಂಡು ಇತರರ ನೆರವಿನೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಶಿಬಿರವು ಮಾನವೀಯ ಸೇವೆಗೆ ಸಾಕ್ಷಿಯಾಯಿತು. ದೂರದ ಊರುಗಳಿಂದ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ಅಂಗವಿಕಲರು ಕೃತಕ ಅಂಗಗಳ ಜೋಡಣೆಯ ಮೂಲಕ ತಮ್ಮ ಬದುಕಿನಲ್ಲಿ ಹೊಸ ಆಶಾಕಿರಣ ಮೂಡುವ ನಿರೀಕ್ಷೆಯಲ್ಲಿದ್ದರು.

ಆತ್ಮಸ್ಥೈರ್ಯ ತುಂಬುವ ಕಾರ್ಯ: ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ಅಂಗವಿಕಲರ ಸೇವೆ ಅತ್ಯಂತ ಶ್ರೇಷ್ಠವಾದ ಮಾನವೀಯ ಕಾರ್ಯವಾಗಿದೆ. ದೈಹಿಕ ಅಂಗವೈಕಲ್ಯದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯುತ್ತಿದೆ ಎಂದರು.

ಅಂಗವೈಕಲ್ಯ ಹೊಂದಿದವರು ಸಮಾಜದಲ್ಲಿ ಯಾರಿಗೂ ಹೊರೆಯಾಗದೆ ಸ್ವಾಭಿಮಾನದಿಂದ ಬದುಕು ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆ ಮುಂದೆ ಬಂದು ಸೇವಾ ಚಟುವಟಿಕೆ ಕೈಗೊಳ್ಳುತ್ತಿರುವುದು ಶ್ಲಾಘನೀಯ. ಕೃತಕ ಅಂಗಗಳ ಜೋಡಣೆಯಂತಹ ಶಿಬಿರಗಳು ಕೇವಲ ದೈಹಿಕ ನೆರವಿಗೆ ಸೀಮಿತವಾಗದೆ, ಅಂಗವಿಕಲರಲ್ಲಿ ಹೊಸ ಬದುಕಿನ ಭರವಸೆ ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸನ್ಮಾರ್ಗ ಬಳಗದ ಸೇವೆಗೆ ಮೆಚ್ಚುಗೆ: ನಗರದ ಮೇಯರ್ ಪಿ.ಗಾದೆಪ್ಪ ಮಾತನಾಡಿ, ನೂರಾರು ಅಂಗವಿಕಲರನ್ನು ಒಂದೆಡೆ ಸೇರಿಸಿ ಅವರಿಗೆ ಅಗತ್ಯವಿರುವ ಕೃತಕ ಕೈ-ಕಾಲುಗಳ ಜೋಡಣೆಗೆ ವ್ಯವಸ್ಥೆ ಮಾಡಿರುವುದು ಸುಲಭದ ಕೆಲಸವಲ್ಲ. ಈ ಬೃಹತ್ ಶಿಬಿರದ ಯಶಸ್ಸಿಗಾಗಿ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವಾ ಮನೋಭಾವ ಇತರ ಸಂಘಟನೆಗಳಿಗೂ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ತಲುಪಿಸುವ ಕೆಲಸದಲ್ಲಿ ಸ್ವಯಂಸೇವಾ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಅಂಗವಿಕಲರ ಸೇವೆ ಧ್ಯೇಯವಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಉದಯಪುರದ ನಾರಾಯಣ ಸೇವಾ ಸಂಸ್ಥೆಯ ಸೇವಾ ಕೈಂಕರ್ಯ ಅನುಕರಣೀಯವಾಗಿದೆ ಎಂದರು.

ಬಳ್ಳಾರಿಯಲ್ಲಿ ಬೃಹತ್ ಕೃತಕ ಕೈ-ಕಾಲು ಜೋಡಣೆ ಶಿಬಿರ ನಡೆಸಲು ಸಹಕಾರ ನೀಡಿದ ಸಂಸ್ಥೆಯ ಮುಖ್ಯಸ್ಥೆ ವಂದನಾ ಹಾಗೂ ಅವರ ತಂಡದ ಸೇವೆ ವಿಶೇಷವಾಗಿ ಸ್ಮರಿಸಿದರು. ನೂರಾರು ಅಂಗವಿಕಲರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಇದಕ್ಕಾಗಿ ಬಳಗದ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿದ್ದು, ನಾರಾಯಣ ಸೇವಾ ಸಂಸ್ಥೆಯ ಸಹಕಾರದಿಂದ ಈ ಮಾನವೀಯ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸಿದರು.

ಶಿಬಿರದ ಕಾರ್ಯ ವೀಕ್ಷಿಸಿದ ಎಸ್ಪಿ ಪೆನ್ನೇಕರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಶಿಬಿರಕ್ಕೆ ಭೇಟಿ ನೀಡಿ ಕೃತಕ ಕೈ-ಕಾಲು ಜೋಡಣೆ ಕಾರ್ಯ ವೀಕ್ಷಿಸಿದರು. ಅಂಗವಿಕಲರಿಗೆ ನೆರವಾಗುವ ನಿಟ್ಟಿನಲ್ಲಿ ಸನ್ಮಾರ್ಗ ಗೆಳೆಯರ ಬಳಗ ಕೈಗೊಂಡಿರುವ ಸೇವಾ ಕಾರ್ಯ ಶ್ಲಾಘಿಸಿದರು.

ಶಿಬಿರದಲ್ಲಿ ನಾರಾಯಣ ಸೇವಾ ಸಂಸ್ಥೆಯ ತಂಡವು ಫಲಾನುಭವಿಗಳಿಗೆ ಕೃತಕ ಅಂಗಗಳ ಜೋಡಣೆ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಅಂಗವಿಕಲರು ಹಾಗೂ ಅವರ ಕುಟುಂಬ ಸದಸ್ಯರಿಂದ ಶಿಬಿರದ ಆವರಣ ತುಂಬಿತ್ತು.

ಡಿವೈಎಸ್ಪಿ ಪ್ರಸಾದ ಗೋಖಲೆ, ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ವೆಂಕಟೇಶಮೂರ್ತಿ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಗುಡಿಗಂಟಿ, ಗೋವಿಂದರಾಜುಲು, ಹನುಮಂತಪ್ಪ, ಸನ್ಮಾರ್ಗ ಗೆಳೆಯರ ಬಳಗದ ಉಪಾಧ್ಯಕ್ಷ ಜಗದೀಶ್, ಹನುಮಂತರೆಡ್ಡಿ ಕೊರ್ಲಗುಂದಿ, ಚಂದ್ರಶೇಖರ ಆಚಾರ್ ಕಪ್ಪಗಲ್, ಅಶೋಕ್ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಪಂಗಡಗಳ ಬದಿಗಿಟ್ಟು ಲಿಂಗಾಯತರು ಒಂದಾಗಲಿ: ರಮೇಶ ಕತ್ತಿ
ಜೋಗಿ, ಕಬ್ಬಿನಾಲೆ, ಕೆರೆಮನೆಗೆ ‘ಮಹಾಬಲ’ ಪ್ರಶಸ್ತಿ