ಸುದ್ದಿಗೋಷ್ಠಿಯಲ್ಲಿ ಮೀಸಲಾತಿ ಜಾಗೃತಿ ಸಮಿತಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ಮಸೂದೆಯನ್ನು ಮಂಡಿಸಿ, ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಕಾಂಗ್ರೆಸ್ ವಿರುದ್ದ ಅಭಿಯಾನ ನಡೆಸಲಾಗುವುದೆಂದು ಮೀಸಲಾತಿ ಜನಜಾಗೃತಿ ಸಮಿತಿ ಎಚ್ಚರಿಸಿದೆ.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಕೋರ್ಟ್ ವಕೀಲ ಹಾಗೂ ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಹರಿರಾಮ್, ರಾಜ್ಯ ಸರ್ಕಾರಕ್ಕೆ ಕೊಟ್ಟ ಎಲ್ಲ ಗಡುವು ಮುಗಿದಿದೆ. ಒಳಮೀಸಲಾತಿಯ ಕುರಿತು ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳದಿದ್ದರೆ ಅಧಿವೇಶನ ಮುಗಿದ ನಂತರ ಕಾಂಗ್ರೆಸ್ ವಿರುದ್ಧವಾಗಿ ಅಭಿಯಾನ ಶುರು ಮಾಡುವುದು ಅನಿವಾರ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಳಿಸಲಾಗುವುದು ಎಂದರು.
ಕಳೆದ ಮೂರು ದಶಕಗಳಿಂದ ಕರ್ನಾಟಕದಲ್ಲಿ ಒಳ ಮೀಸಲಾತಿ ಕುರಿತು ದೊಡ್ಡ ಚಳುವಳಿ ಮತ್ತು ಹೋರಾಟಗಳು ನಡೆದಿದೆ. ಈ ಹೋರಾಟದ ಪ್ರತಿಫಲವಾಗಿ 2005ರಲ್ಲಿ ರಾಜ್ಯ ಸರ್ಕಾರ ಸದಾಶಿವ ಆಯೋಗ ರಚಿಸಿತು. ಆಯೋಗವು ಇಡೀ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ರಾಜ್ಯದ ವಿವಿದ ಸಂಘಟನೆಗಳ ನಾಯಕರೊಂದಿಗೆ ಚರ್ಚಿಸಿ, ಮನೆ ಮನೆಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದೆ. 101 ಜಾತಿಗಳನ್ನು ಅಧ್ಯಯನ ಮಾಡಿ ಅವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಗ್ರಹಿಸಿದೆ. ಕೂಲಂಕುಶ ಅಧ್ಯಯನದ ನಂತರ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಒಪ್ಪಿಸಿದೆ.ಚುನಾವಣೆ ಗಿಮಿಕ್ ಮಾಡಿದ ಬಿಜೆಪಿಯಿಂದ ದಲಿತರಿಗೆ ಮೋಸ:
ವರದಿಯನ್ನು ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳದೇ ಉದಾಸೀನ ತೋರಲಾಗುತ್ತಿದೆ. ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸುವುದಾಗಲಿ, ಚರ್ಚಿಸುವುದಾಗಲಿ ಅಥವಾ ಅದನ್ನು ಜಾರಿ ಮಾಡುವ ಬಗ್ಗೆ ಯಾವುದೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿಲ್ಲ. ಮತ್ತೆ ರಾಜ್ಯಾದ್ಯಂತ ಒಳಮಿಸಲಾತಿ ಪರ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ, ತಮ್ಮ ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಸುಮ್ಮನಿದ್ದ ಬಿಜೆಪಿ ಸರ್ಕಾರವು ದಲಿತರ ಕಣ್ಣೂರೆಸಲು ಚುನಾವಣೆಯ ಸಂದರ್ಭದಲ್ಲಿ ನಾವು ಕೇಂದ್ರ ಸರ್ಕಾರಕ್ಕೆ ಒಳಮಿಸಲಾತಿಯ ವರದಿಯನ್ನು ಶಿಫಾರಸ್ಸು ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿತು. ಇನ್ನೇನು ಒಳಮಿಸಲಾತಿ ಜಾರಿಯಾಗಿಯೇ ಬಿಟ್ಟಿತು ಅನ್ನುವಂತ ಗುಮಾನಿ ಸೃಷ್ಟಿಸಿ ಇಡೀ ದಲಿತ ಸಮುದಾಯಕ್ಕೆ ಮೋಸ ಮಾಡಿತು ಎಂದು ಆರೋಪಿಸಿದರು.ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸಾದ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಳಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿ ದಲಿತರ ಮತಗಳನ್ನು ಪಡೆಯುವ ಹುನ್ನಾರ ಮಾಡಿ ಯಶಸ್ವಿಯೂ ಆಯಿತು. ಆದರೆ, ತದನಂತರ ಒಳಮಿಸಲಾತಿಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಒಳ ಮೀಸಲಾತಿಯನ್ನು ವಿಷಯವನ್ನು ಕೇವಲ ಚುನಾವಣೆಯ ಸರಕನ್ನಾಗಿ ಬಳಸಿಕೊಂಡು ನಿರಂತರವಾಗಿ ದಲಿತರನ್ನು ಮೋಸ ಮಾಡುತ್ತಿವೆ ಎಂದರು.
ಈ ಬಾರಿಯ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ಮಸೂದೆಯನ್ನು ಮಂಡಿಸಿ, ಚರ್ಚೆ ಮಾಡದಿದ್ದರೆ ಹೋರಾಟದ ಹಾದಿ ತುಳಿಯುವುದು ಅನಿವಾರ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಕುರಿತು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಸಮದಾದಾಯ ಹಿತಕ್ಕಾಗಿ ಕಾಂಗ್ರೆಸ್ ವಿರುದ್ಧ ದನಿ ಎತ್ತಬೇಕಾಗುತ್ತದೆ ಎಂದು ಭಾಸ್ಕರ್ ಪ್ರಸಾದ್ ಹೇಳಿದು. ಶ್ರೀನಿವಾಸ್, ಸೇರಿದಂತೆ ಇತರರು ಇದ್ದರು.