ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾಡಳಿತ ಭವನದ ಎದುರು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪಕ್ಷದ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಇತರರ ನೇತೃತ್ವದಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಘೋಷಣೆ ಕೂಗುವ ಮೂಲಕ ಜ್ಞಾನೇಶರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮುಖಾಂತರ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಬೆನ್ನೆಲುಬಾದ ಒಂದು ಸ್ವತಂತ್ರ ಸಂಸ್ಥೆಯಾಗಿದೆ. ಆದರೆ, ಆಯೋಗದ ನಿಷ್ಪಕ್ಷಪಾತತನಕ್ಕೆ ಧಕ್ಕೆಯಾದಾಗ ಅದನ್ನು ದೇಶದ ಪ್ರತಿಯೊಬ್ಬರೂ ಪ್ರಶ್ನಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಪ್ರಜೆಗಳೇ ಪ್ರಭುಗಳು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಅತೀ ದೊಡ್ಡ ಶಕ್ತಿಯಾಗಿದೆ. ಅಂತಹ ಹಕ್ಕನ್ನೇ ಕಸಿಯಲು ಕೇಂದ್ರ ಸರ್ಕಾರವು ಆಯೋಗವನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದು ಆರೋಪಿಸಿದರು.ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆ ಮಾಡಿಕೊಂಡಿರುವ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ತಳಹದಿಯನ್ನೇ ಬುಡಮೇಲು ಮಾಡುತ್ತಿದೆ. ದೇಶಾದ್ಯಂತ ಸುಮಾರು 13 ಕೋಟಿ ಮತದಾರರು, ಕರ್ನಾಟಕದಲ್ಲಿ 1 ಕೋಟಿ 7 ಲಕ್ಷ ಹಾಗೂ ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 2 ಲಕ್ಷಕ್ಕೂ ಅಧಿಕ ಮತಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕಲಾಗಿದೆ. ವಿಶೇಷವಾಗಿ ಅಲ್ಪಸಂಖ್ಯಾತರು, ಕಾಂಗ್ರೆಸ್ ಬೆಂಬಲಿತರ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು, ಮತದಾರರ ಪಟ್ಟಿಯಿಂದ ಹೆಸರು ಅಳಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ದೂರಿದರು.
ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ಸೆ.30ರಂದು ನಡೆಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಜಿಲ್ಲಾ ಮಟ್ಟದಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ, 13 ಕೋಟಿ ಮತದಾರರನ್ನು ಕೈಬಿಟ್ಟಿರುವ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸಲಾಗುವುದು. ನಮ್ಮ ಪಕ್ಷದ ಹೋರಾಟವು ನಿರಂತರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಸಮರ್ಥ ಶಾಮನೂರು, ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ, ಮಹಿಳಾ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಮಾಲತೇಶ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಹದಡಿ ಜಿ.ಸಿ.ನಿಂಗಪ್ಪ, ಆರ್.ಎಚ್.ನಾಗಭೂಷಣ, ಜಿ.ಎಸ್.ಮಂಜುನಾಥ ಗಡಿಗುಡಾಳ್, ಎ.ನಾಗರಾಜ, ಎಸ್.ಮಲ್ಲಿಕಾರ್ಜುನ, ಬಿ.ಎಚ್.ವೀರಭದ್ರಪ್ಪ, ಹುಲ್ಮನಿ ಗಣೇಶ, ಇಂಟೆಕ್ ಮಂಜಣ್ಣ, ನಂಜಾನಾಯ್ಕ, ಹರೀಶ ಕೆಂಗಲಹಳ್ಳಿ, ಎಚ್.ಜೆ.ಮೈನುದ್ದೀನ್, ಎಸ್.ಎಸ್.ಗಿರೀಶ, ಡೋಲಿ ಚಂದ್ರು, ವರುಣ ಬೆಣ್ಣೆಹಳ್ಳಿ, ಮಂಜಮ್ಮ, ದಾಕ್ಷಾಯಣಮ್ಮ ಇತರರು ಇದ್ದರು.