ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಿಗೆ ಪ್ರಚಾರ ಆಂದೋಲನ

KannadaprabhaNewsNetwork | Published : Feb 14, 2025 12:34 AM

ಸಾರಾಂಶ

ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಾತಿ ಆಂದೋಲನ ವಾಹನಕ್ಕೆ ಬುಧವಾರ ಪಾಲಿಕೆ ಮುಂಭಾಗ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಹಸಿರು ನಿಶಾನೆ ತೋರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ 2.16 ಲಕ್ಷ ಆಸ್ತಿದಾರರಿದ್ದು, 115 ಕೋಟಿ ರು. ತೆರಿಗೆ ಪಾವತಿಸಬೇಕಾಗಿದೆ. ಇದರಲ್ಲಿ 101 ಕೋಟಿ ರು. ಆಸ್ತಿ ತೆರಿಗೆ ವಸೂಲಿಯಾಗಿದ್ದು, ಇನ್ನೂ 14 ಕೋಟಿ ರು. ತೆರಿಗೆ ವಸೂಲಿ ಬಾಕಿ ಇದೆ. ಬಾಕಿ ತೆರಿಗೆ ವಸೂಲಿಗಾಗಿ ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಹೇಳಿದ್ದಾರೆ.

ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಾತಿ ಆಂದೋಲನ ವಾಹನಕ್ಕೆ ಬುಧವಾರ ಪಾಲಿಕೆ ಮುಂಭಾಗ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಗಾಗಿ ಎರಡು ಸಂಚಾರಿ ವಾಹನಗಳು ಜನತೆಯಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ ನಡೆಸಲಿವೆ. ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಮಾರ್ಚ್ ಅಂತ್ಯದ ವರೆಗೆ ಈ ವಾಹನಗಳು ಸಂಚರಿಸಿ, ಧ್ವನಿವರ್ಧಕ ಮೂಲಕ ತೆರಿಗೆ ಪಾವತಿಸುವಂತೆ ಬಾಕಿ ತೆರಿಗೆದಾರರಿಗೆ ವಿನಂತಿಸಲಿದೆ ಎಂದರು.

ನೇರ ಪಾವತಿ ಅವಕಾಶ:

ಬಾಕಿ ತೆರಿಗೆದಾರರು ಪಾಲಿಕೆಯ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲೂ ತೆರಿಗೆ ಪಾವತಿಗೆ ಅವಕಾಶ ಇದೆ. ಅಲ್ಲದೆ ಮನೆಯಿಂದಲೇ ಆನ್‌ಲೈನ್‌ ಮೂಲಕವೂ ತೆರಿಗೆ ಪಾವತಿಸಬಹುದು. ಇಲ್ಲವೇ ಪಾಲಿಕೆಯ ಕಚೇರಿಯಿಂದ ಉಚಿತ ಚಲನ್‌ ಪಡೆದು ಇಲ್ಲಿಯೇ ಪಾವತಿಸಬಹುದು. ಕ್ಲಪ್ತ ಸಮಯದಲ್ಲಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಉದ್ಯಮಿಗಳಿಗೆ ನೋಟಿಸ್‌:

ಕೆಲವು ಉದ್ಯಮಿಗಳು ಹಲವು ತಿಂಗಳಿಂದ ಕೋಟಿಗಟ್ಟಲೆ ರು. ಮೊತ್ತದ ತೆರಿಗೆ ಬಾಕಿ ಉಳಿಸಿದ್ದಾರೆ. ಅಂತಹವರಿಗೆ ನೋಟಿಸ್‌ ನೀಡಲು ಕ್ರಮ ಕೈಗೊಳ್ಳಲಾಗುವುದು. ಎರಡು ತಿಂಗಳಲ್ಲಿ ತೆರಿಗೆ ಪಾವತಿಸದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಡೋರ್‌ ನಂಬರ್‌ ಇಲ್ಲದ ಆಸ್ತಿಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುವುದು. ಪ್ರತಿ ವರ್ಷ ಶೇ.3ರಿಂದ ಶೇ.5ರ ವರೆಗೆ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ. ಈ ಬಾರಿಯೂ ಶೇ.3ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದರು.

ತಲಾ 25 ಲಕ್ಷ ರು. ಮಂಜೂರು:

ಪಾಲಿಕೆಯ ಪ್ರತಿ ವಾರ್ಡ್‌ ಸದಸ್ಯರಿಗೆ ತಲಾ 25 ಲಕ್ಷ ರು. ಅನುದಾನ ಮಂಜೂರು ಮಾಡಲಾಗಿದೆ. ಮೇಯರ್‌ಗೆ ಮಾತ್ರ 1.30 ಕೋಟಿ ರು. ಅನುದಾನ ಮಂಜೂರುಗೊಂಡಿದ್ದು, ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಪಾಲಿಕೆ ಕಂದಾಯ ಉಪ ಆಯುಕ್ತೆ ಅಕ್ಷತಾ ಕೆ., ನೀರಾವರಿ ವಿಭಾಗದ ಅಧಿಕಾರಿ ನರೇಶ್‌ ಶೆಣೈ ಇದ್ದರು. ..............................

ಮುಂಗಡ ಪಾವತಿಗೆ ಶೇ.5 ರಿಯಾಯ್ತಿ 2022-23ನೇ ಸಾಲಿನಲ್ಲಿ ಶೇ.90 ತೆರಿಗೆ ಪಾವತಿಯಾಗಿದೆ. 99 ಕೋಟಿ ರು. ಗುರಿಯಲ್ಲಿ 117 ಕೋಟಿ ರು. (ಮುಂಗಡ ತೆರಿಗೆ ಸೇರಿ) ಗುರಿ ಮೀರಿದ ಸಾಧನೆ ಮಾಡಲಾಗಿದೆ. 18 ಕೋಟಿ ರು. ಹೆಚ್ಚು ತೆರಿಗೆ ಸಂಗ್ರಹಿಸಲಾಗಿದೆ. 2025-26ನೇ ಸಾಲಿನ ಮುಂಗಡ ತೆರಿಗೆ ಪಾವತಿ ಮೇಲೆ ಶೇ.5ರ ವಿಶೇಷ ರಿಯಾಯ್ತಿ ನೀಡಲಾಗುವುದು. ತೆರಿಗೆ ಪಾವತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ತೆರಿಗೆ ಬಾಕಿ ಇರಿಸಿದವರಿಗೆ ಭಾನುವಾರ ಸಹಿತ ಪ್ರತಿ ದಿನ ಪಾಲಿಕೆಯಿಂದ ಕರೆ ಮಾಡಿ ತಿಳಿಸಲಾಗುತ್ತಿದೆ. ತೆರಿಗೆ ಪಾವತಿದಾರರು ವಾರ್ಡ್‌ ನಂಬರು ಹಾಗೂ ಡೋರ್‌ ನಂಬರು ನಮೂದಿಸಿದರೆ, ಆನ್‌ಲೈನ್‌ನಲ್ಲಿ ಸ್ವಯಂ ಆಗಿ ಅವರ ತೆರಿಗೆ ಎಷ್ಟು ಎಂಬುದು ಡಿಸ್‌ಪ್ಲೇ ಆಗುತ್ತದೆ. ಅದೇ ಮೊತ್ತವನ್ನು ನೇರವಾಗಿ ಪಾವತಿಸಿದರೆ ಆಯಿತು. ಈ ಬಗ್ಗೆ ಮಾಹಿತಿಗೆ 0824-2220313 ಅಥವಾ 306 ಸಂಖ್ಯೆಗೆ ಕರೆ ಮಾಡಬಹುದು. ಇಲ್ಲವೇ ವೆಬ್‌ಸೈಟ್‌-mccpropertytax.in ಮೂಲಕವೂ ತೆರಿಗೆ ಪಾವತಿಸಬಹುದು ಎಂದು ಆಯುಕ್ತ ರವಿಚಂದ್ರ ನಾಯಕ್‌ ಹೇಳಿದರು.ತುಂಬೆ ಡ್ಯಾಂ: 70 ದಿನಕ್ಕೆ ನೀರು ಸಾಕು

ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಪ್ರಸಕ್ತ 70 ದಿನಕ್ಕೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತ ರವಿಚಂದ್ರ ನಾಯಕ್‌ ಹೇಳಿದರು.

ತುಂಬೆ ಡ್ಯಾಂನಿಂದ ಪ್ರತಿದಿನ ಮಂಗಳೂರಿಗೆ 160 ಎಂಎಲ್‌ಡಿ ನೀರು ಪಂಪಿಂಗ್‌ ಮಾಡಲಾಗುತ್ತಿದೆ. 96 ಸಾವಿರ ನೀರಿನ ಸಂಪರ್ಕ ಇದ್ದು, 86 ಸಾವಿರ ಲೈವ್‌ ಸಂಪರ್ಕ ಇದೆ. ಇದಲ್ಲದೆ ಎಂಸಿಎಫ್‌, ಎಸ್‌ಇಝಡ್‌ ಹಾಗೂ ಉಳ್ಳಾಲ, ಮೂಲ್ಕಿ ಪಂಚಾಯ್ತಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು.

ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದರೆ, ಅದರ ಕೆಳಭಾಗದಲ್ಲಿ ಇರುವ ಅಡ್ಯಾರು ಡ್ಯಾಂನಿಂದ ಪ್ರತಿದಿನ 70 ಎಂಎಲ್‌ಡಿಯಷ್ಟು ನೀರನ್ನು ತುಂಬೆ ಡ್ಯಾಂಗೆ ಪಂಪಿಂಗ್‌ ಮಾಡಲಾಗುತ್ತದೆ. ಈ ಬಾರಿ ಜಕ್ರಿಬೆಟ್ಟು, ಎಎಂಆರ್‌ ಡ್ಯಾಂಗಳ ಗೇಟ್‌ಗಳನ್ನು ಈಗಲೇ ಬಂದ್‌ ಮಾಡಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಈ ಮೂಲಕ 90 ದಿನಗಳಿಗೆ ನೀರು ಸಂಗ್ರಹಿಸಿ ಅನಿವಾರ್ಯವಾದರೆ ಮುಂಗಾರು ಪೂರ್ವ ಮಳೆಯನ್ನು ಆಧರಿಸಿ ಮೇ ತಿಂಗಳಲ್ಲಿ ಅನಿವಾರ್ಯವಾದರೆ ನೀರಿನ ರೇಷನಿಂಗ್‌ ಮಾಡಲಾಗುವುದು ಎಂದರು.

ಉಳ್ಳಾಲಕ್ಕೆ ತುಂಬೆಯಲ್ಲಿ ಪ್ರತ್ಯೇಕ ಜಾಕ್‌ವೆಲ್‌ ನಿರ್ಮಿಸಿ ಪ್ರಾಯೋಗಿಕವಾಗಿ ನೀರು ಪೂರೈಕೆಯಾಗುತ್ತಿದೆ. ಪರಿಪೂರ್ಣವಾಗಿ ನೀರು ಪೂರೈಕೆ ಆರಂಭವಾದಾಗ ಪಾಲಿಕೆ ವತಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. ಉಳ್ಳಾಲ ನಗರ ಸಭೆಯಿಂದ 2.7 ಕೋಟಿ ರು. ಹಾಗೂ ಮೂಲ್ಕಿ ಪಟ್ಟಣ ಪಂಚಾಯ್ತಿಯಿಂದ 1.2 ಕೋಟಿ ರು. ಪಾಲಿಕೆಗೆ ನೀರಿನ ಬಿಲ್ಲು ಪಾವತಿಗೆ ಬಾಕಿ ಇದೆ ಎಂದರು.

Share this article