ಕಳಪೆ ಕಾಮಗಾರಿ ಮಾಡುವಾಗ ಜನಪ್ರತಿಧಿಗಳು ನೋಡಲ್ವಾ?

KannadaprabhaNewsNetwork |  
Published : Jun 29, 2024, 12:30 AM IST
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸುತ್ತಿರುವ ಮೇಯರ್‌. | Kannada Prabha

ಸಾರಾಂಶ

ನಗರದ ಫುಟ್‌ಪಾತ್‌ಗಳಲ್ಲಿ ಪಾದಾಚಾರಿಗಳಿಗೆ ನಡೆದಾಡಲು ಅನಾನುಕೂಲ ಆಗುವಂತೆ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಡಿಯಲ್ಲಿ ನಡೆಸಲಾಗುತ್ತಿರುವ ನೇತ್ರಾವತಿ ರಿವರ್‌ ಫ್ರಂಟ್‌ ಯೋಜನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಎಂಜಿನಿಯರ್‌ಗಳು ಅಷ್ಟೊಂದು ಕಳಪೆಯಾ? ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಸಂಶಯವಿದೆ. ಈ ರೀತಿ ಕಳಪೆ ಕಾಮಗಾರಿ ನಡೆಯುವಾಗ ಜನಪ್ರತಿನಿಧಿಗಳು ಯಾರೂ ನೋಡಲ್ವಾ? ಜನಪ್ರತಿನಿಧಿಗಳು ಇಷ್ಟೊಂದು ದುರ್ಬಲರಾ?

ಮಂಗಳೂರು ನಗರದ ಸಾರ್ವಜನಿಕರೊಬ್ಬರು ಮೇಯರ್‌ ಅವರನ್ನು ತರಾಟೆಗೆ ತೆಗೆದುಕೊಂಡದ್ದು ಹೀಗೆ.. ಸಾರ್ವಜನಿಕರ ಕುಂದುಕೊರತೆ ಆಲಿಸುವ ಮೇಯರ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎಕ್ಕೂರು ನಿವಾಸಿಯೊಬ್ಬರು ಕರೆ ಮಾಡಿ ಕಳಪೆ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೇತ್ರಾವತಿ ರಿವರ್‌ ಫ್ರಂಟ್‌ ಯೋಜನೆಯಲ್ಲಿ ಸಿಆರ್‌ಝಡ್‌ ಕಾನೂನು ಉಲ್ಲಂಘನೆಯಾಗಿರುವುದು ಮಾತ್ರವಲ್ಲದೆ, ಪರಿಸರಕ್ಕೂ ತೀವ್ರ ಹಾನಿ ತಂದೊಡ್ಡಲಿದೆ. ಮೊದಲ ಮಳೆಗೇ ತಡೆಗೋಡೆ ಕುಸಿದು ಕಳಪೆ ಕಾಮಗಾರಿ ಬಹಿರಂಗವಾಗಿದೆ. ಕೋಟ್ಯಂತರ ರು. ಜನರ ಹಣ ನಷ್ಟವಾಗಿದೆ. ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು, ಈ ಯೋಜನೆ ಯಾಕೆ ನಿಲ್ಲಿಸಬಾರದು? ಕಳಪೆ ಕಾಮಗಾರಿ ನಡೆಯುವಾಗ ಜನಪ್ರತಿನಿಧಿಗಳು ಇಷ್ಟೊಂದು ದುರ್ಬಲರಾಗಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಕ್ರಿಯಿಸಿದ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ನಡೆಯುತ್ತಿರುವ ಕಾಮಗಾರಿ ಆಗಿರುವುದರಿಂದ ಪಾಲಿಕೆಯಿಂದ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಮಂಗಳೂರಿಗೆ ಸ್ಮಾರ್ಟ್‌ ಸಿಟಿ ಯೋಜನೆ ದೊರೆತಿರುವುದೇ ಈ ರಿವರ್‌ ಫ್ರಂಟ್‌ ಯೋಜನೆಯ ಪ್ರಸ್ತಾಪದಿಂದ. ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಬೋಳಾರದವರೆಗಿನ 2.1 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್‌ ಅನುಮೋದನೆ ದೊರಕಿ ಕಾಮಗಾರಿ ಆರಂಭವಾಗಿದೆ. ಇತ್ತೀಚೆಗೆ ತಡೆಗೋಡೆ ಕುಸಿತ ಆಗಿರುವ ಕುರಿತು ಸ್ಮಾರ್ಟ್‌ ಸಿಟಿ ಬೋರ್ಡ್‌ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಎನ್‌ಜಿಟಿ ತಂಡ ಈಗಾಗಲೇ ಅಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಎನ್‌ಜಿಟಿ ಕಾಮಗಾರಿಗೆ ತಡೆ ನೀಡಿದೆ. ಕುಸಿತಗೊಂಡ ತಡೆಗೋಡೆಯನ್ನು ಗುತ್ತಿಗೆದಾರರಿಗೆ ಮರು ನಿರ್ಮಾಣ ಮಾಡಲು ಸೂಚಿಸಲಾಗಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದ್ದು, ಎನ್‌ಜಿಟಿ ಕ್ಲಿಯರೆನ್ಸ್‌ ದೊರೆತ ಬಳಿಕ ಮುಂದುವರಿಯಲಿದೆ. ಕಳಪೆ ಕಾಮಗಾರಿಯ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಯತ್ನ ಮಾಡುವುದಾಗಿ ಹೇಳಿದರು.ಮೂಲಸೌಕರ್ಯ ಸಮಸ್ಯೆಗಳೇ ಹೆಚ್ಚು: ಒಟ್ಟು 20ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ ಮೇಯರ್‌, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯವಾಗಿ ಮಳೆಗಾಲದಲ್ಲಿ ಹದಗೆಟ್ಟ ರಸ್ತೆ, ತಡೆಗೋಡೆ ಕುಸಿತ ಭೀತಿ ಇತ್ಯಾದಿ ಸಮಸ್ಯೆಗಳೇ ಹೆಚ್ಚಿದ್ದವು.ಕಿತ್ತು ಹೋದ ರಸ್ತೆ ತೇಪೆ: ಸುರತ್ಕಲ್‌ನ ಗೋವಿಂದದಾಸ್‌ ಕಾಲೇಜು ಹಿಂಬದಿಯ ರಸ್ತೆ ಹದಗೆಟ್ಟಿದ್ದು, ಒಂದೇ ಮಳೆಗೆ ರಸ್ತೆಯ ತೇಪೆ ಕಿತ್ತು ಹೋಗಿದೆ. ಸ್ಥಳೀಯ ಕಾರ್ಪೊರೇಟರ್‌ಗೆ ತಿಳಿಸಿದರೂ ಸ್ಪಂದನೆ ದೊರಕಿಲ್ಲ. ನಾನೂ ಬಿಜೆಪಿ ಕಾರ್ಯಕರ್ತ, ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಲ್ವಾ ಎಂದು ಅಲ್ಲಿನ ಸ್ಥಳೀಯರೊಬ್ಬರು ಮೇಯರ್‌ಗೆ ಮಾರ್ಮಿಕವಾಗಿ ಅಹವಾಲು ಸಲ್ಲಿಸಿದರು.

ಬಾರೈಬೈಲ್‌ನ ಕಂಬದಕೋಡಿಯಲ್ಲಿ ರಸ್ತೆ ಮಾಡಿಕೊಡಿ ಎಂದು ರಾಜೇಂದ್ರ ಎಂಬವರು ಮನವಿ ಮಾಡಿದರೆ, ಶಕ್ತಿನಗರದ ಶಕ್ತಿ ಸ್ಕೂಲ್‌ ಎದುರಿನ ರಸ್ತೆ 23 ವರ್ಷಗಳಿಂದ ಡಾಂಬರೇ ಕಂಡಿಲ್ಲ. ನಾನೇ ಮಣ್ಣು ಹಾಕಿ ರಸ್ತೆ ರಿಪೇರಿ ಮಾಡುತ್ತಿದ್ದೇನೆ. ರಸ್ತೆ ಮಾಡಿಕೊಡಿ ಎಂದು ಸ್ಥಳೀಯರೊಬ್ಬರು ಒತ್ತಾಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್‌ ಚೌಟ, ಲೋಹಿತ್‌ ಅಮೀನ್‌ ಹಾಗೂ ಅಧಿಕಾರಿಗಳು ಇದ್ದರು.

ನಗರದ ಫುಟ್‌ಪಾತ್‌ಗಳಲ್ಲಿ ಪಾದಾಚಾರಿಗಳಿಗೆ ನಡೆದಾಡಲು ಅನಾನುಕೂಲ ಆಗುವಂತೆ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ನಗರದ ಹಲವೆಡೆ ಫಾಸ್ಟ್‌ಪುಡ್‌ ಸ್ಟಾಲ್‌ಗಳಲ್ಲಿ ಸ್ವಚ್ಛತೆ ಕೊರತೆಯ ದೂರುಗಳ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳ ಮೂಲಕ ದಾಳಿ ನಡೆಸಿ ತೆರವಿಗೆ ಕ್ರಮ ವಹಿಸಲಾಗುವುದು. ಪ್ರತಿ ವಾರ್ಡ್‌ನಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ವಾರ್ಡ್‌ಗಳಲ್ಲಿ ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ವೆಂಡಿಂಗ್‌ ಝೋನ್‌ (ವ್ಯಾಪಾರ ವಲಯ)ಗಳನ್ನು ಗುರುತಿಸಿ ಅಲ್ಲಿಗೆ ವ್ಯಾಪಾರ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು. ಸ್ಥಳಾಂತರ ಆಗದವರಿಗೆ ಕಾನೂನು ಕ್ರಮ ವಹಿಸುವುದಾಗಿ ಮೇಯರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ