ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆ
ಕಾರ್ಯಕರ್ತರನ್ನು ಮರೆತರೆ ರಾಜಕಾರಣದಲ್ಲಿರಲು ಸಾಧ್ಯವಿಲ್ಲ. ನಮ್ಮೊಂದಿಗೆ ಕಾರ್ಯಕರ್ತರೂ ಸಹ ಬೆಳೆಯಬೇಕು. ಎರಡನೇ ಹಂತದ ನಾಯಕರನ್ನು ಬೆಳೆಸುವ ಕಾರ್ಯ ನಾವು ಮಾಡಬೇಕಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯ ಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾರರ ಮನೆ ಮನೆಗೆ ತೆರಳಿ ಸಂಪರ್ಕ ಮಾಡಬೇಕು. ಮುಖಂಡರಿಂದ ಅವರ ಮನವೊಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮೇ 28 ರಿಂದ ಜೂನ್ 3 ರವರೆಗೆ ಕಾರ್ಯಕರ್ತರು ಕ್ರಿಯಾಶೀಲವಾಗಿ ಶಿಕ್ಷಕರನ್ನು ಸಂಪರ್ಕಿಸಿ ಮನವೊಲಿಸಬೇಕು. ವಿಧಾನ ಪರಿಷತ್ತಿನಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಬೇಕು. ವಿಧಾನ ಸಭೆಯಲ್ಲಿ ಪಾಸ್ ಆದ ಬಿಲ್‌ಗಳು ಪರಿಷತ್ತಿಗೆ ಬಂದಾಗ ಸೋಲ ಕಾಣಬಾರದು. ನಮ್ಮ ಸಂಖ್ಯೆ ಹೆಚ್ಚಿದ್ದರೆ ಸರ್ಕಾರಕ್ಕೆ ಮುಜುಗರವಾಗುವುದನ್ನು ತಪ್ಪಿಸಬಹುದು ಎಂದರು.ಲೋಕಸಭಾ ಚುನಾವಣೆಯಲ್ಲಿ ನಮ್ಮ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ ಎಲ್ಲಾ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ವಿಧಾನ ಪರಿಷತ್ ಚುನಾವಣೆ ನಂತರ ಪ್ರತಿ ಪಂಚಾಯ್ತಿಗೆ ತೆರಳಿ ಕಾರ್ಯಕರ್ತರ ಭೇಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಬರುತ್ತಿರುವ ವರದಿಗಳು, ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ಜಯಪ್ರಕಾಶ್ ಹೆಗ್ಡೆ ಅವರು ಗೆಲ್ಲುವುದು ನಿಶ್ಚಿತ. ಈ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಶಾಸಕರು, ಕಾರ್ಯಕರ್ತರು, ಮುಖಂಡರು ನಮ್ಮದೇ ಚುನಾವಣೆ ಎಂದು ಭಾವಿಸಿ ಕೆಲಸ ಮಾಡಿದ್ದಾರೆ. ಫಲಿತಾಂಶದ ನಂತರ ಪಕ್ಷ ಹೇಗೆ ಕಟ್ಟಬೇಕು ಎಂದು ಸಮಾಲೋಚನೆ ನಡೆದಿದೆ. ಸಂಘಟನೆಯನ್ನ ಕ್ರಿಯಾತ್ಮಕವಾದ ಹಾದಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಪ್ರತಿ ಬೂತ್‌ನ ವಿಮರ್ಶೆ ಮಾಡುವ ಪ್ರಯತ್ನ ನಡೆದಿರುವುದು ವಿಶೇಷ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಉಪಸ್ಥಿತರಿದ್ದರು.
ಪೋಟೋ ಫೈಲ್ ನೇಮ್ 24 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿದರು.