ಇತಿಹಾಸ ಮರೆತ ನಾವು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವೇ?

KannadaprabhaNewsNetwork |  
Published : Mar 23, 2026, 01:15 AM IST
22ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಇತ್ತೀಚೆಗೆ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರದ ಸಮಾರೋಪ ಸಮಾರಂಭ ನಡೆಯಿತು | Kannada Prabha

ಸಾರಾಂಶ

ರಾಮನಗರ: ಕೃಷಿಯ ಮೂಲದ ಹೆಣ್ಣನ್ನು ಮೂಲಮಾತೃಕೆಯರು ಎನ್ನಬೇಕು. ಪುರಾತನವಾದ ಈ ಸತ್ಯವನ್ನು ಮರೆಮಾಚಿ ಪುರುಷ ಪಾರಮ್ಯ ಮೆರೆಯುತ್ತಿರುವ ನಾವು ಇತಿಹಾಸವನ್ನೇ ಮರೆಯುತ್ತಿದ್ದೇವೆ. ಇತಿಹಾಸವನ್ನು ಮರೆತ ನಾವು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವೇ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರಶ್ನಿಸಿದರು

ರಾಮನಗರ: ಕೃಷಿಯ ಮೂಲದ ಹೆಣ್ಣನ್ನು ಮೂಲಮಾತೃಕೆಯರು ಎನ್ನಬೇಕು. ಪುರಾತನವಾದ ಈ ಸತ್ಯವನ್ನು ಮರೆಮಾಚಿ ಪುರುಷ ಪಾರಮ್ಯ ಮೆರೆಯುತ್ತಿರುವ ನಾವು ಇತಿಹಾಸವನ್ನೇ ಮರೆಯುತ್ತಿದ್ದೇವೆ. ಇತಿಹಾಸವನ್ನು ಮರೆತ ನಾವು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವೇ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರಶ್ನಿಸಿದರು.

ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯವಸಾಯದ ವಿವರಗಳನ್ನು ಕುರಿತು ಹೇಳುವ ಶಿಬಿರ ಇದಲ್ಲ. ಬದಲಿಗೆ ಕನ್ನಡ ಸಾಹಿತ್ಯ ಪ್ರಂಪರೆಯಲ್ಲಿ ಬೇಸಾಯದ ಬದುಕು ಎಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿತ್ತು ಎಂಬುದನ್ನು ವಿವರಿಸಿ ಹೇಳುವುದು ಈ ಶಿಬಿರದ ಮುಖ್ಯ ಉದ್ದೇಶ. ಪ್ರಾಚೀನರಿಂದ ಆಧುನಿಕರ ವರೆಗೆ ಇದ್ದ ಕಾವ್ಯದ ಸಾರವನ್ನು ವಿವರಿಸುತ್ತಾ ಧರ್ಮವೇ ದೊಡ್ಡದು ಎಂಬ ಮಾತಿಗೆ ಮೀರಿ ಕಾವ್ಯಧರ್ಮ ದೊಡ್ಡದು ಎಂಬ ಉಕ್ತಿಯಲ್ಲಿ ಹೆಚ್ಚು ನಂಬಿಕೆ ಇಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ ಮಾತನಾಡಿ, ಇನ್ನು ಕೇವಲ ಕೆಲವೇ ವರ್ಷಗಳಲ್ಲಿ ಬೇಸಾಯದ ಬದುಕಿಗೂ ಕಂಪನಿಯೊಂದರ ವಸ್ತುಗಳಿಗೆ ಹೇಗೆ ಬೆಲೆ ನಿರ್ಧರಿಸಿ ಮಾರಾಟ ಮಾಡುವರೋ ಹಾಗೆಯೇ ರೈತ ಬೆಳೆದ ಬೆಳೆಗೂ ತಾನೇ ಬೆಲೆ ನಿಗದಿ ಪಡಿಸುವ ಕಾಲ ಬಂದೇ ಬರುತ್ತದೆ ಎಂದು ಹೇಳಿದರು.

ಬಹುರಾಷ್ಟ್ರೀಯ ಕಂಪನಿಗಳ ವಿಷಪೂರಿತ ಔಷಧಿ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ಅಮ್ಮ ಮಾಡುತ್ತಿದ್ದ ಉಪ್ಪೆಸರು ತನ್ನ ಸತ್ವ ಮತ್ತು ಸ್ವಾದವನ್ನು ಕಳೆದುಕೊಂಡಿದೆ. ಇಷ್ಟೆಲ್ಲ ಆತಂಕಗಳ ನಡುವೆ ಮತ್ತೆ ಮೊದಲಿನ ಸ್ಥಿತಿಗೆ ಭೂಮಿಯನ್ನು ಹದಗೊಳಿಸಿ, ಎಲ್ಲವನ್ನೂ ನಿಲ್ಲಿಸಿ ಪಾರಂಪರಿಕ ನೆಲೆಗೆ ತರಬೇಕಾದರೆ ಅದೆಷ್ಟು ವರ್ಷಗಳ ಸಮಯ ಹಿಡಿಯುವುದೋ ಗೊತ್ತಿಲ್ಲ ಎಂದು ಅತಂಕ ವ್ಯಕ್ತಪಡಿಸಿದರು.

ಅಕಾಲಿಕ ಹಾಗೂ ಅರೆಕಾಲಿಕ ಮಳೆ, ನೀರಿನ ಅಪವ್ಯಯ ಮಾನವ ಸಮುದಾಯದ ಬದುಕಿನ ಮೇಲೆ ನೇರ ಪರಿಣಾಮ ಬೀರದೆ ಇರುವುದಿಲ್ಲ. ಕುಮಾರವ್ಯಾಸನ ಕಾವ್ಯದ ತಿರುಳು ಕೃಷಿಮೊದಲು ಸರ್ವಕ್ಕೆ ಉಕ್ತಿಯಲ್ಲಿ ನಂಬಿಕೆ ಇಟ್ಟು, ನಾವು ಹಾಗೆ ನಡೆದುಕೊಳ್ಳಲಿಲ್ಲ ಎಂದರೆ ಘೋರ ಪರಿಣಾಮಗಳನ್ನು ಹೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿಬಿರಾರ್ಥಿಗಳು ತಮ್ಮ ಮನದಾಳದ ಮಾತುಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು. ಏಜಾಜ್ ಪಾಷಾ ಮಾತನಾಡಿ ಈ ಶಿಬಿರದ ವಿಷಯ ಹೊಳೆದಿರುವುದನ್ನು ಗಮನಿಸಿದರೆ , ಮಾನವೀಯ ಮೌಲ್ಯಗಳನ್ನು ತಂದುಕೊಡಬಲ್ಲದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕೃಷಿಯಲ್ಲಿ ನಾವು ಪಡುವ ಕಷ್ಟ ನಿಮಗೆ ಬೇಡವೆಂದು ಹೆತ್ತವರೇ ನಗರ ಪ್ರದೇಶಗಳಿಗೆ ತಮ್ಮ ಮಕ್ಕಳನು ಕಳುಹಿಸಿ ಬೆಸಾಯದ ಬದುಕಿನಿಂದ ದೂರವಿಡುತ್ತಿದ್ದಾರೆ. ಬೇಸಾಯವೇ ಗೊತ್ತಿಲ್ಲ ಎಂದರೆ ಅದರ ಕುರಿತು ಸಾಹಿತ್ಯಸೃಷ್ಟಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಮಾರೋಪ ಸಮಾರಂಭಕ್ಕೂ ಮೊದಲು ಚಿಂತಕ ಡಾ. ಮಂಜುನಾಥ ಅದ್ದೆ ಅವರ ಸಮ್ಮುಖದಲ್ಲಿ ಸಾಧಕ ರೈತ ಸಮುದಾಯದೊಡನೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಬೀಬಿಜಾನ್ ಮೌಲಾಸಾಬ್ ಹಳೆಮನಿ, ಡಾ. ಸ್ವಾಮಿ ಆನಂದ, ಪ್ರಸನ್ನಭಟ್, ಸಹನಾ ಕಾಂತಬೈಲು, ಚಂ.ಸು. ಪಾಟೀಲ, ದೋ.ಚಿ. ಗೌಡ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಶಿಬಿರ ನಿರ್ದೇಶಕ ಚನ್ನಪ್ಪ ಅಂಗಡಿ, ಡಾ. ನೂರ್ ಸಮದ್ ಅಬ್ಬಲಗೆರೆ, ರೈತಹೋರಾಟಗಾರ್ತಿ ಅನುಸೂಯಮ್ಮ, ಅಕಾಡೆಮಿ ಸದಸ್ಯ ಡಾ. ರವಿಕುಮಾರ್ ಬಾಗಿ ಪಾಲ್ಗೊಂಡಿದ್ದರು.

22ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಇತ್ತೀಚೆಗೆ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲು ವರದಿ ವಿರೋಧಿಸಿ ಬಲಗೈಜಾತಿಗಳ ಒಕ್ಕೂಟದಿಂದ ನಾಳೆ ಪ್ರತಿಭಟನೆ
ಕಾಡುಗೊಲ್ಲರ ಹಟ್ಟಿಗಳಿಲ್ಲ ಅದ್ಧೂರಿ ರಾಮನವಮಿಗೆ ಸಿದ್ಧತೆ