ಮೀನುಗಾರರ ಮೇಲಿನ ಅಟ್ರಾಸಿಟಿ ಕೇಸು ರದ್ದುಗೊಳಿಸಿ: ಯಶ್ಪಾಲ್‌ ಸುವರ್ಣ ಆಗ್ರಹ

KannadaprabhaNewsNetwork | Published : Mar 23, 2025 1:36 AM

ಸಾರಾಂಶ

ಮಲ್ಪೆ ಬಂದರಿನಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೀನುಗಾರರ ಮೇಲೆ ಹಾಕಲಾಗಿರುವ ದಲಿತ ದೌರ್ಜನ್ಯ ಕೇಸನ್ನು ಹಿಂಪಡೆಯಬೇಕು ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಪೊಲೀಸ್‌ ಇಲಾಖೆಗೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಲ್ಪೆ ಬಂದರಿನಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೀನುಗಾರರ ಮೇಲೆ ಹಾಕಲಾಗಿರುವ ದಲಿತ ದೌರ್ಜನ್ಯ ಕೇಸನ್ನು ಹಿಂಪಡೆಯಬೇಕು ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಪೊಲೀಸ್‌ ಇಲಾಖೆಗೆ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ಉದ್ದೇಶಪೂರ್ವಕವಾಗಿ ಜಾತಿಯ ಬಣ್ಣ ಹಚ್ಚಲಾಗುತ್ತಿದೆ. ರಾಜಕೀಯವನ್ನೂ ಎಳೆತರಲಾಗಿದೆ. ಸ್ವತಃ ಹಲ್ಲೆಗೊಳಗಾದ ಮಹಿಳೆಯೇ ಯಾರ ಮೇಲೂ ಯಾವುದೇ ಕ್ರಮ ಬೇಡ ಎಂದು ಹೇಳಿದ್ದಾರೆ. ಆದ್ದರಿಂದ ಮೀನುಗಾರರ ಮೇಲೆ ಹಾಕಿರುವ ದಲಿತ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಿ ಮತ್ತೆ ಎಲ್ಲರೂ ಸೌಹಾರ್ದದಿಂದ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದವರು ಹೇಳಿದ್ದಾರೆ.

ಹೊರ ಜಿಲ್ಲೆಯ ಕಾರ್ಮಿಕಕು ಮತ್ತು ಇಲ್ಲಿನ ಮೀನುಗಾರರು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇಲ್ಲಿ ವ್ಯವಹಾರ ನಡೆಸುವುದಕ್ಕಾಗುವುದಿಲ್ಲ. ಇಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಮೀನುಗಾರರ ಸಂಘದ ನೇತೃತ್ವದಲ್ಲಿ ಬಗೆಹರಿಸಲಾಗಿದೆ. ಆದರೆ ಈ ಘಟನೆಯನ್ನು ಯಾರೋ ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಬಂದರಿನ ಒಗ್ಗಟ್ಟಿಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

---------------ಶಾಸಕ ಸ್ಥಾನ ಕಾಂಗ್ರೆಸ್ ನೀಡಿದ ಭಿಕ್ಷೆ ಅಲ್ಲ

ಘಟನೆಗೆ ಈಗ ರಾಜಕೀಯದ ಬಣ್ಣವನ್ನು ಹಚ್ಚಲಾಗುತ್ತಿದೆ. 2 ವರ್ಷಗಳಿಂದ ಬಂದರಿಗೆ ಯಾವುದೇ ಅನುದಾನ ಬಂದಿಲ್ಲ, ಬಂದರಿನಲ್ಲಿರುವ ಮೀನುಗಾರಿಕಾ ಕಚೇರಿಯ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಕಸ ಗುಡಿಸುವವರ, ಗುತ್ತಿಗೆ ಆಧಾರಿತ ಸಿಬ್ಬಂದಿಗೆ ವೇತನವನ್ನೂ ಸರ್ಕಾರ ಕೊಟ್ಟಿಲ್ಲ. ಬಂದರಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕಾವಲುಗಾರರ ನೇಮಕಕ್ಕೆ ಮನವಿ ಮಾಡಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅದನ್ನು ಬಿಟ್ಟು ವಾಸ್ತವದ ಅರಿವಿಲ್ಲದ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಶಾಸಕ ಸ್ಥಾನ ನನಗೆ ಕಾಂಗ್ರೆಸ್ ಕೊಟ್ಟ ಭಿಕ್ಷೆ ಅಲ್ಲ, ಅದು ಜನರು ನೀಡಿದ ಹುದ್ದೆ ಎಂದವರು ಪ್ರತಿಕ್ರಿಯೆ ನೀಡಿದರು.

Share this article