ಕನ್ನಡಪ್ರಭ ವಾರ್ತೆ ಬೇಲೂರು
ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ವಿವೇಕಾನಂದ ಯೂತ್ ಮೂವ್ಮೆಂಟ್, ಸಹಬಾಗಿತ್ವದಲ್ಲಿ ಮನೆ ಆಧಾರಿತ ಉಪಶಮನ ಆರೈಕೆ, ಸಮುದಾಯ ಆಧಾರಿತ ರೋರ್ಯಾಕ್ಟ್ ಸಹಯೋಗದೊಂದಿಗೆ ಕ್ಯಾನ್ಸರ್ ಹಾಗೂ ಮಾರಣಾಂತಿಕ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮೊಟ್ಟೆ ವಿತರಿಸಲಾಯಿತು.ರೋಟರಿ ಕ್ಲಬ್ ಕಾರ್ಯದರ್ಶಿ ರಮೇಶ್ ಮಾತನಾಡಿ, ರೋಗ ಬರುವುದಕ್ಕಿಂತ ಮುನ್ನವೇ ಮುನ್ನೆಚ್ಚರಿಕೆ ವಹಿಸಿದರೆ ಬರುವ ರೋಗಗಳನ್ನು ತಡೆಗಟ್ಟಬಹುದು. ಆದರೆ ಕ್ಯಾನ್ಸರ್ ರೋಗವು ಎಲ್ಲಿ, ಯಾವಾಗ, ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ಗೊತ್ತಾಗುವುದಿಲ್ಲ. ಆದರೆ ಈಗ ಕ್ಯಾನ್ಸರ್ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು ರೋಗ ಬಂದಿದೆ ಎಂದು ಹೆದರುವ ಅವಶ್ಯಕತೆ ಇಲ್ಲ. ಅದಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಎಲ್ಲವನ್ನೂ ಗುಣಪಡಿಸಲು ಸಾಧ್ಯ. ಆದ್ದರಿಂದ ಎಲ್ಲ ರೋಗಿಗಳು ಕಾಯಿಲೆ ಬಂದಿದೆ ಎಂಬುದನ್ನು ಮರೆತು ಎಲ್ಲರೊಂದಿಗೆ ಬೆರೆತರೆ ರೋಗವೇ ಮಾಯವಾಗುತ್ತದೆ ಎಂಬುದನ್ನು ಅರಿಯಬೇಕು. ಜತೆಗೆ ನಮ್ಮ ಸಂಸ್ಥೆಯಿಂದ ಹಿಂದಿನಿಂದಲೂ ಇಂತಹ ಹಲವಾರು ರೋಗಗಳಿಗೆ ಸಹಕಾರ ನೀಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ನಿಮ್ಮೊಮದಿಗೆ ನಾವಿರುತ್ತೇವೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆ ಹೇಗೆ ಬರುತ್ತದೆ ತಿಳಿಯುವುದಿಲ್ಲ. ಆದರೆ ತಮ್ಮ ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡಲ್ಲಿ ಪ್ರತಿಯೊಬ್ಬರೂ ತಕ್ಷಣವೇ ಆರೋಗ್ಯ ತಪಾಸಣೆಗೆ ಮುಂದಾಗಬೇಕು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಕೆ, ಬೀಡಿ ಸಿಗರೇಟ್ ಸೇವನೆಯಿಂದಲೂ ಕ್ಯಾನ್ಸರ್‌ತಹ ಕಾಯಿಲೆ ಬರಲು ಕಾರಣವಾಗುತ್ತಿದೆ. ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರ ಮನೆ ಮನೆಗೆ ಗೃಹ ಆರೋಗ್ಯ ತಪಾಸಣೆಗೆ ಚಾಲನೆ ನೀಡಿದೆ. ಮುಂದಿನ ಪೀಳಿಗೆಗೆ ಇಂತಹ ಮಾರಣಾಂತಿಕ ಕಾಯಿಲೆ ಬಾರದಂತೆ ತಡೆಗಟ್ಟಲು ಎಲ್ಲರೂ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆಂದು ರೋಟರಿ ಸಂಸ್ಥೆ ನಮ್ಮೊಮದಿಗೆ ಕೈಜೋಡಿಸಿ ಸಹಕಾರ ನೀಡುತಿದ್ದು, ಇದೇ ರೀತಿ ಬೇರೆ ಸಂಸ್ಥೆಗಳು ಸಹಕಾರಕ್ಕೆ ಮುಂದಾಗಬೇಕು ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಡಾ.ವೈಷ್ಣವಿ ಪೀರ್ ಮಾತನಾಡಿದರು. ರೋಟರಿ ಸಂಸ್ಥೆಯ ರಾಜೇಗೌಡ, ಮೊಗಪ್ಪಗೌಡ, ಯೋಗೇಶ್ಗೌಡ, ಡ್ಯಾನಿಯೆಲ್, ರೋರ್ಯಾಕ್ಟ್ ಅಧ್ಯಕ್ಷೆ ಪೃಥ್ವಿನಿ, ಹಿರಿಯ ಆರೋಗ್ಯಾಧಿಕಾರಿ ಮಂಗಳಮ್ಮ, ದಯಾನಂದ್, ಆರೋಗ್ಯ ಶಿಕ್ಷಕಿ ಉಷಾ ಸೇರಿದಂತೆ ಇತರರಿದ್ದರು.