ಕ್ಯಾನ್ಸರ್‌ ಪೀಡಿತರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು

KannadaprabhaNewsNetwork |  
Published : Jan 04, 2025, 12:30 AM IST
ಬೆಳಗಾವಿಯಲ್ಲಿ ಕೆಎಲ್‌ಇ ಡಾ.ಸಂಪತ್‌ಕುಮಾರ ಹಾಗೂ ಡಾ. ಉದಯಾ ಶಿವಣಗಿ ಕ್ಯಾನ್ಸರ್‌ ಆಸ್ಪತ್ರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದರು | Kannada Prabha

ಸಾರಾಂಶ

ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆದಿವಾಸಿ ಜನರ ಆರೋಗ್ಯ ಕಾಪಾಡುವಲ್ಲಿ ಸದಾ ಕಾರ್ಯಮಗ್ನರಾಗಬೇಕಾಗಿದೆ. ಮುಖ್ಯವಾಗಿ ಕ್ಯಾನ್ಸರ್‌ ಪೀಡಿತ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆ ತೀವ್ರಗೊಳಿಸಬೇಕು. ಅದಕ್ಕಾಗಿಯೇ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆ ಅತ್ಯಾಧುನಿಕವಾದ ಕ್ಯಾನ್ಸರ್‌ ಆಸ್ಪತ್ರೆ ಜನಸೇವೆಗೆ ಅರ್ಪಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆದಿವಾಸಿ ಜನರ ಆರೋಗ್ಯ ಕಾಪಾಡುವಲ್ಲಿ ಸದಾ ಕಾರ್ಯಮಗ್ನರಾಗಬೇಕಾಗಿದೆ. ಮುಖ್ಯವಾಗಿ ಕ್ಯಾನ್ಸರ್‌ ಪೀಡಿತ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆ ತೀವ್ರಗೊಳಿಸಬೇಕು. ಅದಕ್ಕಾಗಿಯೇ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆ ಅತ್ಯಾಧುನಿಕವಾದ ಕ್ಯಾನ್ಸರ್‌ ಆಸ್ಪತ್ರೆ ಜನಸೇವೆಗೆ ಅರ್ಪಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಕೆಎಲ್ಇ ಸಂಸ್ಥೆ ನೂತನವಾಗಿ ಪ್ರಾರಂಭಿಸಿರುವ ಕೆಎಲ್ಇ ಡಾ.ಸಂಪತಕುಮಾರ ಹಾಗೂ ಡಾ. ಉದಯಾ ಶಿವಣಗಿ ಕ್ಯಾನ್ಸರ್‌ ಆಸ್ಪತ್ರೆಯನ್ನು ಶುಕ್ರವಾರ ಜನಸೇವೆಗೆ ಅರ್ಪಿಸಿ ಮಾತನಾಡಿ ಅವರು, ಭಾರತದಂತಹ ರಾಷ್ಟ್ರದಲ್ಲಿ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ಇಂದು ಅತ್ಯಗತ್ಯವಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.ಐಸಿಎಂಆರ್ ಸಮೀಕ್ಷೆಯಂತೆ ದೇಶದಲ್ಲಿ ಸುಮಾರು 20 ಮಿಲಿಯನ್‌ಗೂ ಅಧಿಕ ಜನ ಪ್ರತಿವರ್ಷ ಕ್ಯಾನ್ಸರ್ ಪೀಡಿತರಾಗುತ್ತಿದ್ದು, ಸುಮಾರು 7 ಮಿಲಿಯನ್‌ಗೂ ಅಧಿಕ ಜನರು ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ಪ್ರತಿ ಮೂಲೆಯಲ್ಲೂ ಕ್ಯಾನ್ಸರ್‌ ಆಸ್ಪತ್ರೆ ಕಾರ್ಯನಿರ್ವಹಿಸುವಂತಾಗಬೇಕು. ಅಲ್ಲದೆ, ಉಚಿತ ಹಾಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಬೇಕು. ಅದರಲ್ಲಿಯೂ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಅನೇಕ ರೋಗಗಳು ಬಾಧಿಸುತ್ತಿದ್ದು, ಅದರಲ್ಲಿ ಕ್ಯಾನ್ಸರ್ ಅತೀ ಹೆಚ್ಚು ಪರಿಣಾಮ ಬೀರುತ್ತದೆ. ಅದಕ್ಕಾಗಿ ಅದರ ಕುರಿತು ಹಚ್ಚೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಆರೋಗ್ಯಯುತ ಸಮಾಜ ನಿರ್ಮಾಣವಾದರೆ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದು ಹೇಳಿದರು.

ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು-ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅನೇಕ ಬಾರಿ, ಕುಟುಂಬದ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸಕಾಲಿಕ ಚಿಕಿತ್ಸೆ ಪಡೆಯುವುದಿಲ್ಲ. ಇದು ಸಾಂಪ್ರದಾಯಿಕ ಮನಸ್ಥಿತಿಯಿಂದ ಆಗಿರಬಹುದು. ಅಲ್ಲಿ ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದು ಮಹಿಳೆಯರನ್ನು ಒಳಗೊಂಡಂತೆ ಕುಟುಂಬದ ಆದ್ಯತೆಯಾಗಿ ಕಂಡುಬರುವುದಿಲ್ಲ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಕುಟುಂಬದ ಪ್ರತಿಯೊಬ್ಬ ಸದಸ್ಯರು ಮತ್ತು ಒಟ್ಟಾರೆಯಾಗಿ ಸಮಾಜ ಮಹಿಳೆಯರ ಆರೋಗ್ಯ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಅವರ ಆರೈಕೆಯಲ್ಲಿ ಮತ್ತು ಅವರಿಗೆ ಸೂಕ್ತ ಸಕಾಲಿಕ ಚಿಕಿತ್ಸೆಗೆ ಅನುಕೂಲವಾಗುವಂತೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಹೇಳಿದರು.

ಭಾರತ ಸರ್ಕಾರ ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆಯಂತಹ ಆರೋಗ್ಯ ಸೇವೆಯ ಪ್ರವೇಶ ಮತ್ತು ಕೈಗೆಟಕುವ ದರ ಸುಧಾರಿಸಲು ಹಲವಾರು ಉಪಕ್ರಮ ಕೈಗೊಂಡಿದೆ. ಈ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ವ್ಯಾಪಕ ವ್ಯಾಪ್ತಿ ಮತ್ತು ಬೃಹತ್ ಪರಿಣಾಮ ಹೊಂದಿರುವ ಲಕ್ಷಾಂತರ ಜನರ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ ಎಂದರು.ಜಾಗತಿಕವಾಗಿ ವೈದ್ಯಕೀಯ ಜರ್ನಲ್ ಪ್ರಕಾರ, ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆಯಿಂದಾಗಿ ಕ್ಯಾನ್ಸರ್ ಚಿಕಿತ್ಸೆ ಸಮಯೋಚಿತವಾಗಿ ಪ್ರಾರಂಭಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಈ ಯೋಜನೆಯ ಪ್ರಾರಂಭದ ಹಿಂದಿನ ಅವಧಿಗೆ ಹೋಲಿಸಿದರೆ ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ಪ್ರಾರಂಭದ ನಡುವಿನ ಅವಧಿ ಕಡಿಮೆ ಮಾಡಲಾಗಿದೆ. ಇದು ಮುಖ್ಯವಾಗಿ ಕಡಿಮೆ ಆದಾಯದ ಗುಂಪುಗಳಿಗೆ, ಈಗ ಈ ಯೋಜನೆ ವ್ಯಾಪ್ತಿಯನ್ನು 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಸೇರಿಸಲು ವಿಸ್ತರಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಕೈಗೆಟುಕುವ ಆರೋಗ್ಯ ಸೇವೆ ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಒಳ್ಳೆಯ ಗುಣಮಟ್ಟದ ಚಿಕಿತ್ಸೆಯೂ ಸಕಲರಿಗೆ ಲಭಿಸಬೇಕು. ವೈದ್ಯಕೀಯ ವೃತ್ತಿಯಲ್ಲಿರುವವರು ಭಾರತದ ಆರೋಗ್ಯದ ಭವಿಷ್ಯ ರೂಪಿಸಬೇಕು. ವೈದ್ಯಕೀಯ ಕ್ಷೇತ್ರ ಸದಾ ಆವಿಷ್ಕಾರದಿಂದ ಕೂಡಿದ್ದು, ಅವುಗಳ ಪರಿಣಾಮಕಾರಿಯಾದ ಚಿಕಿತ್ಸಾ ಪದ್ಧತಿಯೂ ಜನರಿಗೆ ತಲುಪಿಸಬೇಕು ಎಂದ ಅವರು, ಕೆಎಲ್ಇ ಸಂಸ್ಥೆಯು ಈ ಭಾಗದ ಜನರ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಜನರ ಆರೋಗ್ಯ ಕಾಪಾಡುವಲ್ಲಿ ಮಗ್ನವಾಗಿದೆ. ಸಂಸ್ಥೆಯು ಶತಮಾನದ ಇತಿಹಾಸವಿರುವ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಸಂಬಂಧಿತ ಸೇವೆ ಕಲ್ಪಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ದಾನಿಗಳಿಂದಲೇ ಕೆಎಲ್ಇ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಬಂದಿದೆ. ಸಪ್ತರ್ಷಿಗಳು ನೆಟ್ಟ ಸಸಿ ಇಂದು ಬೃಹದಾಕಾರವಾಗಿದ್ದು, ಅಗತ್ಯವಿರುವ ಎಲ್ಲ ಹಂತದ ಮತ್ತು ವಿವಿಧ ಶಿಕ್ಷಣ ನೀಡುತ್ತಿದೆ. ಮುಖ್ಯವಾಗಿ ಆರೋಗ್ಯ, ತಾಂತ್ರಿಕ ಹಾಗೂ ಕೃಷಿ ವಿಜ್ಞಾನ ಶಿಕ್ಷಣದ ಜೊತೆಗೆ ಸೇವೆ ಕಲ್ಪಿಸಲಾಗುತ್ತಿದೆ. ಈ ಭಾಗದಲ್ಲಿ ಕ್ಯಾನ್ಸರ್‌ ಅತೀ ಹೆಚ್ಚು ಕಂಡು ಬರುತ್ತಿದ್ದು, ಅದರ ನಿರ್ಮೂಲನೆಗಾಗಿ ಸುಮಾರು 300 ಹಾಸಿಗೆಗಳ ಆಸ್ಪತ್ರೆಯನ್ನು ಜನಸೇವೆಗೆ ನೀಡಲಾಗಿದೆ. ಎಲ್ಲ ರೀತಿಯ ಕ್ಯಾನ್ಸರ್‌ಗೆ ಒಂದೇ ಸೂರಿನಡಿ ಚಿಕಿತ್ಸೆ ಲಭಿಸುವಂತೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ವೇಳ‍ೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕೊಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ ಜಗದೀಶ ಶೆಟ್ಟರ, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಹಾಗೂ ಸಮಾರಂಭದಲ್ಲಿ ದಾನಿಗಳಾದ ಡಾ. ಸಂಪತಕುಮಾರ ಎಸ್ ಶಿವಣಗಿ ಹಾಗೂ ಡಾ. ಉದಯಾ ಶಿವಣಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಕ್ಯಾನ್ಸರ್‌ ರೋಗ ಅತ್ಯಧಿಕವಾಗಿ ಕಂಡು ಬರುತ್ತಿದೆ. ಆರಂಭಿಕವಾಗಿ ಕಂಡು ಹಿಡಿದು ಚಿಕಿತ್ಸೆ ನೀಡಬೇಕಾಗಿದೆ. ಅದಕ್ಕಾಗಿ ಗ್ರಾಮೀಣ ಪ್ರದೇಶ ಜನರ ಆರೋಗ್ಯ ಸುಧಾರಿಸಲು ಅತೀ ಹೆಚ್ಚು ಅನುದಾನ ನೀಡಲಾಗುತ್ತಿದೆ. ಸರ್ವಜ್ಞನ ವಚನದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಉತ್ತರ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆಯು ಜನರ ಅನಾರೋಗ್ಯವನ್ನು ಹೋಗಲಾಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಸುಸಜ್ಜಿತವಾದ ಕ್ಯಾನ್ಸರ್‌ ಆಸ್ಪತ್ರೆ ಜನಸೇವೆಗೆ ಅರ್ಪಿಸಿರುವುದು ಅತ್ಯಂತ ಶ್ಲಾಘನೀಯ.

- ಪ್ರಹ್ಲಾದ ಜೋಶಿ ಕೇಂದ್ರ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು