ಶಶಿಕಾಂತ ಮೆಂಡೆಗಾರ
ವಿಜಯಪುರ : ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ, ವಿಜಯಪುರ ಸೇರಿ ಮಹಾರಾಷ್ಟ್ರ-ಕರ್ನಾಟಕ ಗಡಿಜಿಲ್ಲೆಗಳಲ್ಲಿ ಗಾಂಜಾ ಘಾಟು ಜೋರಾಗಿಯೇ ಇದೆ. ಇಲ್ಲಿ ಯಾವುದೇ ಅಕ್ರಮಗಳನ್ನು ಮಾಡಿದರೂ ಅರ್ಧ ಗಂಟೆಯಲ್ಲೇ ನೆರೆಯ ಮಹಾರಾಷ್ಟ್ರ ಸೇರಿಕೊಳ್ಳಬಹುದು ಎಂಬ ಧೈರ್ಯದಿಂದಲೋ ಏನೋ ಒಂದಾದ ಮೇಲೊಂದರಂತೆ ಇಲ್ಲಿ ಅಕ್ರಮ ಹಾಗೂ ದುಷ್ಕೃತ್ಯಗಳು ನಡೆಯುತ್ತಲೇ ಇವೆ.
ಇದರ ಹಿಂದೆ ಡ್ರಗ್ಸ್ ಸೇವನೆಯ ಘಾಟು ಕಂಡು ಬರುತ್ತಿದೆ. ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಂತೂ ಒಂದೆಡೆ ಭೀಮಾತೀರದ ದ್ವೇಷಕ್ಕೆ ತಲೆಗಳು ಉರುಳುತ್ತಿದ್ದರೆ, ಮತ್ತೊಂದೆಡೆ ಅಕ್ರಮ ಗಾಂಜಾ ಘಾಟಿನ ಸದ್ದು ಜೋರಾಗುತ್ತಲೇ ಇದೆ. ನೆರೆಯ ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾದಿಂದ ಬರುವ ಗಾಂಜಾ ಈ ಜಿಲ್ಲೆಗಳಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ. ಅಲ್ಲದೆ, ಇಲ್ಲಿನ ಕಬ್ಬಿನಗದ್ದೆಯ ಮಧ್ಯದಲ್ಲಿ ಬೆಳೆಯುವ ಗಾಂಜಾ, ಸೆಂಟ್ರಲ್ ಜೈಲಿನವರೆಗೂ ಪೂರೈಕೆಯಾಗಿರುವುದು ಪ್ರಕರಣಗಳಿಂದ ಪತ್ತೆಯಾಗಿದೆ.ಹೊರ ರಾಜ್ಯಗಳಿಂದ ಗಾಂಜಾ ಆಮದು:
ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳೆಯುವ ಲಕ್ಷಾಂತರ ರು.ಮೌಲ್ಯದ ಗಾಂಜಾ ಇಲ್ಲಿಯೇ ಖಾಲಿಯಾಗುವುದರಿಂದ ಹೊರ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾದಿಂದಲೂ ಲಾರಿಗಳ ಮೂಲಕ ಗಾಂಜಾವನ್ನು ತಂದು ಮಾರಾಟ ಮಾಡಲಾಗುತ್ತದೆ. ಶಾಲಾ-ಕಾಲೇಜುಗಳು, ಪಬ್‌ಗಳು ಗಾಂಜಾದ ಮಾರುಕಟ್ಟೆಗಳಾಗುತ್ತಿವೆ.
ಹೊಸ ವರ್ಷದ ಹೊಸ್ತಿಲಲ್ಲಿ ಮುಂಬೈ, ಪುಣೆ ಸೇರಿದಂತೆ ದೊಡ್ಡ, ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಗಾಂಜಾ ಪೂರೈಕೆ ಕಳೆದ ವರ್ಷ ವಿಜಯಪುರದಲ್ಲೂ ಭಾರೀ ಸದ್ದು ಮಾಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಗೆ ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಗೆ ಪೂರೈಸಲು ತಂದಿದ್ದ ₹22 ಲಕ್ಷ ಮೌಲ್ಯದ 46 ಕೆ.ಜಿ.ಯಷ್ಟು ಗಾಂಜಾ ಹಾಗೂ ₹8 ಲಕ್ಷ ಮೌಲ್ಯದ ಎರಡು ವಾಹನಗಳು ಸೇರಿ ಒಟ್ಟು ₹30 ಲಕ್ಷ ಮೌಲ್ಯದ ವಸ್ತುಗಳನ್ನು ವಿಜಯಪುರ ಸಿಇಎನ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಒಡಿಶಾದಿಂದ ಗಾಂಜಾ ಖರೀದಿಸಿ, ಅಲ್ಲಿ 2 ಕೆ.ಜಿ.ಪ್ಯಾಕೆಟ್‌ಗಳನ್ನು ರೆಡಿ ಮಾಡಿಕೊಂಡು ತೆಲಂಗಾಣದ ಮೂಲಕ ವಿಜಯಪುರಕ್ಕೆ ಡೆಲಿವರಿ ಕೊಡಲು ಪಾರ್ಸಲ್ ರೀತಿಯಲ್ಲೇ ಪ್ಯಾಕ್ ಮಾಡಿಕೊಂಡು ಬಂದಿದ್ದ ವೇಳೆ ತೆಲಂಗಾಣ ಹಾಗೂ ಮಹಾರಾಷ್ಟ್ರ ಮೂಲದ ಆರೋಪಿಗಳನ್ನು ಬಂಧಿಸಲಾಗಿತ್ತು.
ಗಾಂಜಾ ಬೆಳೆಯುವುದು, ಮಾರಾಟ ಹಾಗೂ ಸಾಗಾಟ ಕುರಿತು ಪೊಲೀಸ್ ಇಲಾಖೆಯೊಂದರಲ್ಲೇ ವರ್ಷಕ್ಕೆ ಸರಾಸರಿ 30 ಪ್ರಕರಣಗಳು ದಾಖಲಾಗುತ್ತಿವೆ. ಇದರೊಟ್ಟಿಗೆ ಅಬಕಾರಿ ಇಲಾಖೆಯಿಂದಲೂ ಕಾರ್ಯಾಚರಣೆ ನಡೆಯುತ್ತಿರುತ್ತದೆ. ಪ್ರತಿ ಬಾರಿಯೂ ರೈಡ್ ಆದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಿಕ್ಕೇ ಸಿಗುತ್ತದೆ.ಚಿಕನ್‌ಪೀಸ್, ಕಬ್ಬಿನಗದ್ದೆಗಳಲ್ಲಿರುತ್ತೆ ಗಾಂಜಾ:
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಕಬ್ಬು ಬೆಳೆಯುವುದರಿಂದ ಬೆಳೆಗಳ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗುತ್ತದೆ. ಮುಗಿಲೆತ್ತರಕ್ಕೆ ಬೆಳೆಯುವ ಕಬ್ಬಿನ ಗದ್ದೆಗಳ ಮಧ್ಯದಲ್ಲಿ ಗಾಂಜಾ ಬೆಳೆದರೆ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಧೈರ್ಯದಿಂದ ಬೆಳೆಯುತ್ತಾರೆ. ಅದರಲ್ಲೂ ಭೀಮಾ ತೀರ ಹಾಗೂ ಕೃಷ್ಣಾ ತೀರಗಳಲ್ಲಿ ಬೆಳೆಯುವ ಕಬ್ಬಿನ ಗದ್ದೆಗಳಲ್ಲಿ ಗಾಂಜಾ ಬೆಳೆ ಹೆಚ್ಚಾಗಿ ಕಂಡು ಬರುತ್ತದೆ. ಜೊತೆಗೆ, ಯಾವುದೇ ವಾಹನಗಳು ಹೋಗಲಾಗದ ಹಳ್ಳದ ದಂಡೆಗಳಲ್ಲಿಯೂ ಗಾಂಜಾವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ.
ಕಳೆದ ವರ್ಷ ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ದೊಡ್ಡದಾದ ಚಿಕನ್ ಪೀಸ್‌ನೊಳಗೆ ಗಾಂಜಾ ಸೇರಿಸಿ, ಚಿಕನ್‌ಗೆ ಸ್ಟಿಚ್ (ಹೊಲಿಗೆ) ಹಾಕಿ ಅದನ್ನು ಸಪ್ಲೈ ಮಾಡಿದ್ದ ಪ್ರಕರಣ ಇಲ್ಲಿನ ಖಾಕಿಗಳನ್ನೇ ಬೆಚ್ಚಿ ಬೀಳಿಸಿತ್ತು. 2021ರಲ್ಲಿ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಜಮೀನೊಂದರ ಮೇಲೆ ದಾಳಿ ನಡೆಸಿದಾಗ ಆರೋಪಿ ರಾಮು ಗಗನಮಾಲಿ ಎಂಬಾತನ ಜಮೀನಿನಲ್ಲಿ 315 ಗಾಂಜಾ ಗಿಡಗಳು, ಅದರಿಂದ ಬಂದ 53 ಕೆ.ಜಿ. ಗಾಂಜಾ ಸೇರಿ ಒಟ್ಟು 5.30 ಲಕ್ಷ ರೂ.ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಇಂಡಿ ತಾಲೂಕಿನ ಮಿರಗಿಯಲ್ಲಿ ರೈತ ಮಾದೇವ ಖಸ್ಕಿ ಎಂಬಾತ ತನ್ನ ಕಬ್ಬಿನತೋಟದಲ್ಲಿ ಬೆಳೆದ 62 ಗಾಂಜಾ ಗಿಡ ಸಹಿತ, 10 ಲಕ್ಷ ರೂ.ಮೌಲ್ಯದ ಒಂದು ಕ್ವಿಂಟಲ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು.ಕೋಟ್....
ವಿಜಯಪುರ ಜಿಲ್ಲೆಯಾದ್ಯಂತ ಕಬ್ಬಿನಗದ್ದೆಗಳಲ್ಲಿ ಗಾಂಜಾ ಬೆಳೆಯುತ್ತಾರೆ. ಅಲ್ಲದೆ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಿಂದಲೂ ಹೈಟೆಕ್ ಗಾಂಜಾ ಪೂರೈಕೆಯಾಗುತ್ತದೆ. ಹೀಗಾಗಿ, ಜಿಲ್ಲೆಯ 857 ಪಿಎಸ್ಐ ಹಾಗೂ ಬೀಟ್ ಸಿಬ್ಬಂದಿಗಳ ನೇತೃತ್ವದಲ್ಲಿ ಆಯಾ ಠಾಣೆಗಳ ವ್ಯಾಪ್ತಿಗಳಲ್ಲಿನ ಶಾಲೆ ಹಾಗೂ ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ.
- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.