ಬಂಡವಾಳಶಾಹಿ ವ್ಯವಸ್ಥೆಯನ್ನು ಹತ್ತಿಕ್ಕಬೇಕಾಗಿದೆ

KannadaprabhaNewsNetwork | Published : May 2, 2025 12:08 AM

ಸಾರಾಂಶ

1886ರಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ಬೃಹತ್ ಹೋರಾಟ ಕೈಗೊಂಡಾಗ ಹೋರಾಟ ಹತ್ತಿಕ್ಕಲು ನಡೆದ ದಮನಕಾರಿ ಆಳುವ ವರ್ಗದ ವಿರುದ್ಧ ಸಿಡಿದೆದ್ದ ಕಾರ್ಮಿಕರು ಕನಿಷ್ಠ 8 ಗಂಟೆ ದುಡಿಮೆಯ ಅವಧಿ ಮತ್ತು ಕಾರ್ಮಿಕರಾಗಿ ಭದ್ರತೆ, ಕನಿಷ್ಠ ವೇತನ ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ನಡೆದ ರಕ್ತ ಸಿಕ್ತ ಹೋರಾಟವೇ ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿದೆ.

ಕೊಪ್ಪಳ:

ಕಾರ್ಮಿಕರ ಹಕ್ಕುಗಳಿಗಾಗಿ ಕಾರ್ಮಿಕರು ನಡೆಸಿದ ಸಂಘರ್ಷದ ದಿನವೇ ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಎಂದು ಕಾರ್ಮಿಕ ಮುಖಂಡ ಶರಣುಗಡ್ಡಿ ಹೇಳಿದರು.

ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಎಐಯುಟಿಯುಸಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

1886ರಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ಬೃಹತ್ ಹೋರಾಟ ಕೈಗೊಂಡಾಗ ಹೋರಾಟ ಹತ್ತಿಕ್ಕಲು ನಡೆದ ದಮನಕಾರಿ ಆಳುವ ವರ್ಗದ ವಿರುದ್ಧ ಸಿಡಿದೆದ್ದ ಕಾರ್ಮಿಕರು ಕನಿಷ್ಠ 8 ಗಂಟೆ ದುಡಿಮೆಯ ಅವಧಿ ಮತ್ತು ಕಾರ್ಮಿಕರಾಗಿ ಭದ್ರತೆ, ಕನಿಷ್ಠ ವೇತನ ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ನಡೆದ ರಕ್ತ ಸಿಕ್ತ ಹೋರಾಟವೇ ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿದೆ ಎಂದರು.

ಕಾರ್ಮಿಕರ ತ್ಯಾಗ, ಬಲಿದಾನ, ಜೀವತೆತ್ತ ದಿನವಾಗಿದೆ. ವಿಶ್ವದ ದುಡಿಯುವ ಜನಗಳೇ ಒಂದಾಗಿ ಕಳೆದುಕೊಳ್ಳಲು ಏನು ಇಲ್ಲ. ಎಲ್ಲವನ್ನೂ ಕಳೆದುಕೊಂಡ ಕಾರ್ಮಿಕರು ಗುಲಾಮಗಿರಿಯಿಂದ ಹೊರಬಂದು ಇಡೀ ಜಗತ್ತನ್ನು ಗೆಲ್ಲಲು ಮುಂದಾಗಬೇಕೆಂದು ಕಾರ್ಲ್‌ಮಾರ್ಕ್ಸ್ ಅವರು ದುಡಿಯುವ ವರ್ಗದ ಪರವಾಗಿ ಮತ್ತು ಶ್ರಮಿಕ ವರ್ಗ ಅಧಿಕಾರಕ್ಕೆ ಬರಬೇಕೆಂದು ಜಾಗೃತಿ ಮೂಡಿಸಿದ್ದರು ಎಂದು ಹೇಳಿದರು.

ಕಾರ್ಲ್‌ಮಾರ್ಕ್‌ ವಾದದ ಆಧಾರದ ಮೇಲೆ 1917ರಲ್ಲಿ ಕಾರ್ಮಿಕ ವರ್ಗದ ನಾಯಕ ಲೆನಿನ್ ಕಾರ್ಮಿಕರ ರಾಜ್ಯ ಸ್ಥಾಪಿಸಿದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಮಾಜವಾದಿ ವ್ಯವಸ್ಥೆ ಸ್ಥಾಪಿಸಿ ವಿಶ್ವದ ದುಡಿಯುವ ಜನರಿಗೆ ಅಧಿಕಾರ ನೀಡಿದರು ಎಂದರು.

ಸಾಮೂಹಿಕ ಉತ್ಪಾದನೆ, ವ್ಯಕ್ತಿಗತ ಒಡೆತನ ಇಂದು ರಾಜ್ಯಭಾರ ಮಾಡುತ್ತಿದೆ. ಆದರೆ, ಸಾಮೂಹಿಕ ಉತ್ಪಾದನೆ, ಸಾಮೂಹಿಕ ಹಂಚಿಕೆ, ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ ಮಾಡಿದಾಗಲೇ ಸಾಧ್ಯ ಎಂದು ಮಹಾನ್ ವ್ಯಕ್ತಿಗಳು ತೋರಿಸಿಕೊಟ್ಟಿದ್ದಾರೆ. ಇಂಥ ವ್ಯವಸ್ಥೆಗಾಗಿ ವಿಶ್ವ ಕಾರ್ಮಿಕ ವರ್ಗ ವೈಚಾರಿಕವಾಗಿ ಕಾರ್ಮಿಕ ವರ್ಗದ ಪ್ರಜ್ಞೆ ಗಳಿಸಿಕೊಳ್ಳಬೇಕು ಎಂದು ಹೇಳಿದರು.ವಿಶ್ವದಲ್ಲಿ ಕೆಲವೇ ಜನ ಸಂಪತ್ತಿನ ಒಡೆತನ ಹೊಂದಿದ್ದು, ದುಡಿಯುವ ಜನಗಳ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದುಡಿಯುವ ಜನಗಳ ಹಕ್ಕುಗಳನ್ನು ದಮನ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಅಗಾಧವಾದ ಸಂಪತ್ತನ್ನು ಶೇಖರಿಸಿಕೊಂಡಿದ್ದಾರೆ. ಇಂಥ ಬಂಡವಾಳಶಾಹಿ ವ್ಯವಸ್ಥೆಯನ್ನು ಹತ್ತಿಕ್ಕಬೇಕಾಗಿದೆ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ಇತರ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಬಿ. ನಾಗಪ್ಪ ಬಿಕ್ಕನಹಳ್ಳಿ, ಭರಮಪ್ಪ ದೊಡ್ಡಮನಿ, ಮಹಾಂತೇಶ, ಹನುಮಂತ ಬಾರಕೇರ, ಅಶೋಕ ಜಾಲಿಹಾಳ, ಸುರೇಶ ಗಂಡಾಳಿ, ದೇವಪ್ಪ ಕಳ್ಳಿ, ಮೌಲಹುಸೇನ್, ಮಲ್ಲಪ್ಪ, ಮೋದಿನ್‌ಸಾಬ್, ಮೌನೇಶ, ಶಿವಣ್ಣ ಹುಲ್ಲೂರು ಇನ್ನಿತರ ಕಾರ್ಮಿಕರು ಭಾಗವಹಿಸಿದ್ದರು.

Share this article