ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಕೆ.ಆರ್. ನಗರ ತಾಲೂಕಿನ ಅಂಕನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ಮೃತ್ಯುಂಜಯ (33) ಮೃತಪಟ್ಟವರು.
ಬೆಟ್ಟದಪುರ ಹೋಬಳಿಯ ವಡ್ಡರೆ ಹೊಸಹಳ್ಳಿ ಗ್ರಾಮದಲ್ಲಿ ಶುಂಠಿಗೆಂದು ಜಮೀನು ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು, ಜಮೀನು ಬಳಿ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರುವಾಗ ಕೆ.ಆರ್. ನಗರ ಬೆಟ್ಟದಪುರ ಮುಖ್ಯ ರಸ್ತೆಯ ಹಾಡ್ಯ ಗೇಟ್ ಬಳಿ ಬೈಕ್ , ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತ್ಯುಂಜಯ ಸಾವಿಗೀಡಾಗಿದ್ದಾರೆ ಎಂದು ಮೃತರ ಪತ್ನಿ ಶಾಂಭವಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಶವವನ್ನು ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.ಕೆ.ಆರ್. ನಗರ ಶಾಸಕ ಡಿ. ರವಿಶಂಕರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಇತರರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಕೂಲಿ ಕಾರ್ಮಿಕ ಸಂಘ ಹಾಗೂ ಕೃಷಿ ಶುಂಠಿ ಮಾರಾಟ ಸಂಘದ ಪದಾಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲಿ ಮಣ್ಣು ಇದ್ದರಿಂದಲೇ ಈ ಸಮಸ್ಯೆ ಆಗಿದೆ ಎಂದು ಆರೋಪಿಸಿದರು.
ಕೂಲಿ ಕಾರ್ಮಿಕ ಸಂಘದ ಪದಾಧಿಕಾರಿ ಶರೀಫ್ ಮಾತನಾಡಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮೃತರ ಕುಟುಂಬ ಅನಾಥವಾಗಿದೆ, ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು, ಇಲ್ಲವಾದರೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಆಗಮಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.