ಕನ್ನಡಪ್ರಭ ವಾರ್ತೆ ಮಂಡ್ಯಜೈವಿಕ ಸರಪಳಿ ಗಟ್ಟಿಯಾಗಬೇಕಾದರೆ ಸಸ್ಯ ಪ್ರಭೇದಗಳು ನಶಿಸದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಮೈಸೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸಂತೋಷ್ ಮನೋಹರ್ ಹೂಗಾರ್ ತಿಳಿಸಿದರು.
ವನ್ಯ ಜೀವಿಗಳ ಆಹಾರದ ಮೂಲಗಳು ಕಾಡುಗಳಾಗಿವೆ. ಕಾಡುಗಳ ನಶಿಸುವಿಕೆಯಿಂದ ವನ್ಯಜೀವಿಗಳು ಆತಂಕದಲ್ಲಿವೆ. ಇದರಿಂದ ಮಾನವ ಸರಪಳಿಯಾಗಿರುವ ಜೀವ ಸಂಕುಲಕ್ಕೆ ಅಪಾಯ ತಲೆದೋರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನ ತಡೆಗೆ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಅದರ ಸುಸ್ಥಿರತೆ ಬಗ್ಗೆ ಆಶಾಭಾವನೆ ಉಂಟಾಗಿಲ್ಲ. ಪ್ರಸ್ತುತ ಯುವಜನರು ಅತ್ಯಂತ ಪರಿಸರದ ಬಗ್ಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಜಲಕ್ಷಾಮ ಎದುರಾಗಿರುವುದಕ್ಕೆ ಮನುಷ್ಯನ ದುರಾಸೆಯೇ ಕಾರಣ ಎಂದು ದೂಷಿಸಿದರು.ಅಮೆಜಾನ್ ಕಾಡುಗಳನ್ನು ಯಾವ ರೀತಿ ಹಸಿರೀಕರಣ ಮಾಡಲಾಗಿದೆಯೋ ಹಾಗೆಯೇ ಗೆಂಡೆಹೊಸಹಳ್ಳಿ ಪಕ್ಷಿಧಾಮ ಅತ್ಯಂತ ಸುಶ್ರಾವ್ಯವಾಗಿರುತ್ತದೆ. ಹಸಿರು ಹೊದಿಕೆ ಹೆಚ್ಚಿರುತ್ತದೆ. ಈ ಭಾಗದ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮದ ಉಪ ಭಾಗಗಳಾಗಿದ್ದು, ಇವೆರೆಡೂ ವಿಶ್ವಕ್ಕೇ ಮಾದರಿಯಾದ ಪಕ್ಷಿಧಾಮಗಳಾಗಿವೆ. ಇದರ ಉಳಿವಿಗೆ ಸ್ಥಳೀಯ ಜನರು ಮತ್ತು ಪ್ರಜ್ಞಾವಂತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸೋಪು, ಶ್ಯಾಂಪೂ ಇತರೆ ರಾಸಾಯನಿಕಗಳು ಕಣ್ಣು, ಬಾಯಿ, ಮೂಗಿಗೆ ಹೋದರೆ ನಾವೇ ಸುಧಾರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಇಂತಹುದರಲ್ಲಿ ನೀರಿನಲ್ಲೇ ವಾಸ ಮಾಡುವ ಮೀನುಗಳು, ಮೊಸಳೆಗಳು ಸೇರಿದಂತೆ ಎಲ್ಲ ರೀತಿಯ ಜಲಚರ ಜೀವಿಗಳು ತುಂಬಾ ತೊಂದರೆ ಅನುಭವಿಸುತ್ತವೆ ಎಂಬುದನ್ನು ಮನಗಾಣಬೇಕಿದೆ ಎಂದು ಹೇಳಿದರು.
ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎನ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ವೈ.ಕೆ. ಭಾಗ್ಯ, ಪ್ರಾಧ್ಯಾಪಕಿ ಹೀನಾಕೌಸರ್, ಎನ್‌ಎಸ್‌ಎಸ್‌ನ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜನಪದ ಕಲಾವಿದ ಬಸವರಾಜು ಸಂತೆಕಸಲಗೆರೆ ಪರಿಸರ ಸಂರಕ್ಷಣಾ ಗೀತೆಗಳನ್ನು ಸಾಧರಪಡಿಸಿದರು. ಬಳಿಕ ಪರಿಸರ ನಡಿಗೆ ಮೂಲಕ ಜೀವವೈವಿಧ್ಯಗಳ ಪರಿಚಯ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಶ್ರಮದಾನ ನಡೆಯಿತು.