- ಲೋಕಸಭಾ ಸಾರ್ವತ್ರಿಕ ಚುನಾವಣೆ: ಎಲ್ಲಾ ನೌಕರರಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, ಚುನಾವಣಾ ಕೆಲಸ ಕಾರ್ಯಗಳನ್ನು 24x7 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಚುನಾವಣೆಯನ್ನು ನಡೆಸಲು ವೇಳಾ ಪಟ್ಟಿ ಪ್ರಕಟಿಸಿದ್ದು, ಮಾರ್ಚ್ 16 ರಿಂದ ಜೂನ್ 6 ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈಗಾಗಲೇ ಚುನಾವಣಾ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲೆಯಲ್ಲಿ ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳ, ಶೈಕ್ಷಣಿಕ ಸಂಸ್ಥೆಗಳು ಮತ್ತು ಶಾಲಾ ಕಾಲೇಜುಗಳ ಅಧಿಕಾರಿ, ಸಿಬ್ಬಂದಿಯನ್ನು ವಿವಿಧ ತಂಡಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ನೇಮಕ ಮಾಡಿ ಆದೇಶಿಸಲಾಗಿದೆ.
ಚುನಾವಣಾ ತುರ್ತು ಕೆಲಸ ಕಾರ್ಯಗಳ ನಿರ್ವಹಣೆ ಸಂಬಂಧ, ಭಾರತ ಚುನಾವಣಾ ಆಯೋಗವು ಮತ್ತು ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ರವರ ಕಚೇರಿಯಿಂದ ಚುನಾವಣೆಗೆ ಸಂಬಂಧಿಸಿದಂತೆ ಕೋರುವ ವರದಿಗಳನ್ನು ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ನಿಗದಿತ ಸಮಯದೊಳಗೆ ಆಯೋಗಕ್ಕೆ ಸಲ್ಲಿಸಬೇಕಾಗಿರುವುದರಿಂದ ಚುನಾವಣಾ ಇತರೆ ಇಲಾಖಾ ಅಧಿಕಾರಿ, ನೌಕರರು 24x7 ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಚುನಾವಣಾ ತುರ್ತು ಕೆಲಸ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.ಎಲ್ಲಾ ಇಲಾಖೆ ಹಾಗೂ ಅಧೀನ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರು ಯಾವುದೇ ರೀತಿಯ ರಜೆಯ ಮೇಲೆ ತೆರಳದೆ ಕೇಂದ್ರ ಸ್ಥಾನದಲ್ಲಿದ್ದು, 24x7 ಅವಧಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ ಕೋರುವ ವರದಿಗಳನ್ನು ತಪ್ಪದೇ ಸಲ್ಲಿಸಬೇಕಾಗಿರುತ್ತದೆ. ಆದ ಕಾರಣ ಜಿಲ್ಲೆಯಲ್ಲಿ ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳ, ಶೈಕ್ಷಣಿಕ ಸಂಸ್ಥೆಗಳು, ಮತ್ತು ಶಾಲಾ ಕಾಲೇಜುಗಳ ಎಲ್ಲಾ ಅಧಿಕಾರಿ ಹಾಗೂ ನೌಕರರು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಯಾವುದೇ ಅಧಿಕಾರಿ, ನೌಕರರು ರಜೆಯ ಮೇಲೆ ತೆರಳಲು ಮತ್ತು ಕೇಂದ್ರ ಸ್ಥಾನವನ್ನು ಬಿಡಬೇಕಾದಲ್ಲಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆದು ತೆರಳಬೇಕೆಂದು ಕಟ್ಟುನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ತಪ್ಪಿದ್ದಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೆ, ಬೇಜವಾಬ್ದಾರಿ ತೋರಿರುವುದಾಗಿ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿ, ನೌಕರರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ವಯ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆಂದು ತಿಳಿಸಿದ್ದಾರೆ.