ಕನ್ನಡಪ್ರಭ ವಾರ್ತೆ ವಿಜಯಪುರ
ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳಾದ ಮಳೆನೀರು ಕೊಯ್ಲು ಘಟಕ, ಬೋರ್‌ವೆಲ್ ಮರುಪೂರಣ ಘಟಕ ಹಾಗೂ ವಿವಿಧ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರ ಹಮ್ಮಿಕೊಳ್ಳಬೇಕು ಎಂದು ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿ ವಿವೇಕ ಕುಮಾರ ಶರ್ಮಾ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಜ್ಞಾನಿಗಳು, ಜಲವಿಜ್ಞಾನ, ಕೇಂದ್ರ ಅಂತರ್ಜಲ ಮಂಡಳಿ ಆಯುಷ್ ಕೇಶರ್ವಾಣಿಯನ್ನೊಳಗೊಂಡ ತಂಡದ ವತಿಯಿಂದ ನಡೆದ ಸಭೆ ನಡೆಸಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನೆ ಮಾತನಾಡಿದ ಅವರು, ಜಲಾನಯನ ಕಾಮಗಾರಿಗಳನ್ನು ಜಿಯೋ ಟ್ಯಾಗ್ ಮಾಡಬೇಕು. ಜಲ ಶಕ್ತಿ ಅಭಿಯಾನದ ಅಡಿಯಲ್ಲಿ(ಎಂ) ಅಡಿ ಅನುಷ್ಠಾನಗೊಳಿಸುವ ಕಾಮಗಾರಿಗಳನ್ನು ಹಾಗೂ ಮುಕ್ತಾಯಗೊಂಡ ಅಮೃತ ಸರೋವರ ಕಾಮಗಾರಿಗಳನ್ನು ಕಡ್ಡಾಯವಾಗಿ ಜಲ ಶಕ್ತಿ ಅಭಿಯಾನ(ಎಂ)ದ ಆ್ಯಪ್‌ನಲ್ಲಿ ಜಿಯೋಟ್ಯಾಗ್ ಮಾಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಗುಣಮಟ್ಟದ ಪರಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ನೀರಾವರಿ ಪ್ರದೇಶವು ಈಗ 3,02,888 ಹೆಕ್ಟೇರ್ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ನೀರಾವರಿ ಪ್ರದೇಶವನ್ನು ವಿಸ್ತರಿಸಬೇಕು ಎಂದರು.
ಪ್ರಸ್ತುತ ಬರಗಾಲ ಘೋಷೆಣೆಯಾಗಿರುವುದರಿಂದ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹಾಗೂ ಅನುಷ್ಠಾನ ಇಲಾಖೆಗಳ ಅಡಿಯಲ್ಲಿ ಹಮ್ಮಿಕೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಎನ್.ಆರ್.ಎಂ ಕಾಮಗಾರಿಗಳಾದ ಕೆರೆ ಅಭಿವೃದ್ಧಿ/ಹೂಳೆತ್ತುವುದು, ಅಮೃತ ಸರೋವರ ಕಾಮಗಾರಿಗಳು, ನಾಲಾ/ಹಳ್ಳ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯ ಇಲಾಖೆಯಡಿ ನೆಡುತೋಪು ನಿರ್ಮಾಣ, ತೋಟಗಾರಿಕೆ ಕಾಮಗಾರಿಗಳು, ಕೃಷಿ ಇಲಾಖೆ ಕಾಮಗಾರಿಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.ಇದೇ ವೇಳೆ ಜಿಲ್ಲಾ ಪಂಚಾಯತಿಯ ಆವರಣದಲ್ಲಿರುವ ಜಲ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ್ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಡಾ.ವಿಜಯ ಕುಮಾರ ಆಜೂರ ಹಾಗೂ ಅನುಷ್ಠಾನ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.----------------------------
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಜಲಶಕ್ತಿ ತಂಡ ಭೇಟಿ, ಪರಿಶೀಲನೆವಿಜಯಪುರ: ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿ ವಿವೇಕ ಕುಮಾರ ಶರ್ಮಾ ಮತ್ತು ವಿಜ್ಞಾನಿಗಳು, ಜಲವಿಜ್ಞಾನ, ಕೇಂದ್ರ ಅಂತರ್ಜಲ ಮಂಡಳಿ ಆಯುಷ್ ಕೇಶರ್ವಾಣಿಯನ್ನೊಳಗೊಂಡ ತಂಡ ಮಂಗಳವಾರ ತಾಲೂಕಿನ ಹೆಗಡಿಹಾಳ, ಐನಾಪುರ ಹಾಗೂ ಹಡಗಲಿ ಗ್ರಾಮ ಪಂಚಾಯತಿಗಳಿಗೆ ಭೇಟಿ ಪರಿಶೀಲನೆ ನಡೆಸಿತು.ಹೆಗಡಿಹಾಳ ಗ್ರಾಮ ಅಮೃತ ಸರೋವರ, ಬೋರ್‌ವೆಲ್ ಮರು ಪೂರಣ ಘಟಕ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ನಂತರ ಅಮೃತ ಸರೋವರ ಒಳಹರಿವು ಹಾಗೂ ಹೊರಹರಿವುಗಳ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಐನಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆ ಬದಿ ಇರುವ ಬೋರ್‌ವೆಲ್ ಮರು ಪೂರಣ ಘಟಕ ಮತ್ತು ಸರ್ಕಾರಿ ಶಾಲಾ ಕಟ್ಟಡದ ಮಳೆ ನೀರು ಕೊಯ್ಲು ಘಟಕ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಹಡಗಲಿ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ನೆಡು ತೋಪು, ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ ಕಾಮಗಾರಿಗಳಿಗೆ ಭೇಟಿ ನೀಡಿ ಅಲ್ಲಿನ ಸಸಿಗಳಿಗೆ ಸಮಯಕ್ಕೆ ತಕ್ಕಂತೆ ನೀರು ಪೂರೈಸಿ ಗಿಡಗಳು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಹಡಗಲಿ ಕೆರೆಯಿಂದ ಹಡಗಲಿ ಎಲ್.ಟಿ 2 ತಾಂಡಾದ ಜನರಿಗೆ ನೀರು ಸರಬರಾಜಾಗುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ತಾಂಡಾದ ಜನರೊಂದಿಗೆ ಕುಡಿಯುವ ನೀರಿನ ಕುರಿತು ಸಂವಾದ ನಡೆಸಿದರು.ಸಾರ್ವಜನಿಕರಿಗೆ ಸರಬಾರಾಜು ಆಗುವ ಕುಡಿಯುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ಸರಬರಾಜು ಮಾಡಲು ಸ್ಥಳದಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಚಡಚಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ನಿಡುಗುಂದಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಹಿರೇಮಠ, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.