ಕಾರ್ಟೂನಿಸ್ಟರ ದೃಷ್ಟಿಕೋನ ಭಿನ್ನ: ಡಿಜಿಪಿ ಬಿ. ದಯಾನಂದ್

KannadaprabhaNewsNetwork |  
Published : Nov 16, 2025, 03:00 AM IST
ಕುಂದಾಪುರದಲ್ಲಿ ನಡೆದ ಕಾರ್ಟೂನ್‌ ಹಬ್ಬವನ್ನು ಡಿಜಿಪಿ ಬಿ. ದಯಾನಂದ್ ಅವರು ಕಾರ್ಟೂನ್ ಬಿಡಿಸುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಪೊಲೀಸ್ ಸಹಭಾಗಿತ್ವದಲ್ಲಿ ಕಾರ್ಟೂನ್ ಕುಂದಾಪ್ರ ತಂಡದ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ನಗರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಜರುಗಲಿರುವ ‘ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್’ 12ನೇ ಆವೃತ್ತಿಯ ಕಾರ್ಟೂನ್ ಹಬ್ಬ ಶನಿವಾರ ಉದ್ಘಾಟನೆಗೊಂಡಿತು.

ಖಾಕಿಗೊಂದು ಕಾರ್ಟೂನು ಸೆಲ್ಯೂಟ್ ''''ಕಾರ್ಟೂನು ಹಬ್ಬ'''' ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಂದಾಪುರಸಮಾಜದ ಓರೆಕೋರೆಗಳನ್ನು ಗೆರೆಗಳ ಮೂಲಕವೇ ತಿದ್ದುವ ಕಾರ್ಟೂನಿಸ್ಟರ ದೃಷ್ಟಿಕೋನ ಭಿನ್ನವಾಗಿರುತ್ತದೆ. ಆಡಳಿತ ವ್ಯವಸ್ಥೆಯನ್ನು ಸೂಕ್ಷ್ಮ ಕಣ್ಣೋಟವಿಟ್ಟುಕೊಂಡು ವಿಡಂಬನೆ, ಹಾಸ್ಯದ ಮೂಲಕ ಉತ್ತಮ ಸಂದೇಶವುಳ್ಳ ಕಾರ್ಟೂನ್ ರಚಿಸಿ ಕಾರ್ಟೂನಿಸ್ಟರು ಅತೀ ಹೆಚ್ಚು ಟೀಕೆಗಳಿಗೆ ಒಳಗಾಗುತ್ತಾರೆ. ಕುಂದಾಪುರ ನೆಲದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಟೀಕೆ, ಟಿಪ್ಪಣಿಗಳನ್ನು ಮೆಟ್ಟಿ ನಿಂತು ಇಂದು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಅಭಿನಂದನಾರ್ಹ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕ ಬಿ.ದಯಾನಂದ್‌ ಹೇಳಿದರು.ಉಡುಪಿ ಜಿಲ್ಲಾ ಪೊಲೀಸ್ ಸಹಭಾಗಿತ್ವದಲ್ಲಿ ಕಾರ್ಟೂನ್ ಕುಂದಾಪ್ರ ತಂಡದ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ನಗರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಜರುಗಲಿರುವ ‘ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್’ 12ನೇ ಆವೃತ್ತಿಯ ಕಾರ್ಟೂನ್ ಹಬ್ಬವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಹರಿರಾಮ್ ಶಂಕರ್ ಮಾತನಾಡಿ, ಅಧಿಕಾರಿಗಳು ಹಾಗೂ ಸಾಮಾಜಿಕ ಕಳಕಳಿಯುಳ್ಳವರು ಎದುರಿಸುವುದಕ್ಕಿಂತ ಹೆಚ್ಚು ವಿರೋಧವನ್ನು ಎದುರಿಸುವ ವ್ಯಂಗ್ಯ ಚಿತ್ರಕಾರರಿಗೆ ಅವರ ಬದ್ಧತೆಯೇ ರಕ್ಷಣೆಯಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು, 75 ಪೊಲೀಸ್ ಸಿಬ್ಬಂದಿ ಕಾರ್ಯಾಗಾರದಲ್ಲಿ ವ್ಯಂಗ್ಯಚಿತ್ರ ರಚಿಸುವ ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಉಪ ಆಯುಕ್ತ ಜಿ.ಎ.ಬಾವಾ, ವಿನಯ್ ಗಾಂವ್ಕರ್, ಹಿರಿಯ ವಕೀಲ ಎಎಸ್‌ಎನ್ ಹೆಬ್ಬಾರ್, ಗೃಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿದರು.

ಅತ್ಯುತ್ತಮ ಸೇವೆಗೆ ಸನ್ಮಾನ:ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್ಐ ಪ್ರಸನ್ನ, ಆರ್ಮಡ್ ರಿಸರ್ವ್ ಎಸ್ಐ ಜೋಸ್, ಡಿಸಿಆರ್‌ಬಿ ಎಎಸ್ಐ ಪ್ರಕಾಶ್, ಕಂಪ್ಯೂಟರ್ ವಿಭಾಗದ ಆರ್ಮಡ್ ಹೆಡ್‌ಕಾನ್‌ಸ್ಟೇಬಲ್ ವಿಜಯ ಮೊಗವೀರ, ಡಿಪಿಓ ಸಿವಿಲ್ ಹೆಡ್‌ಕಾನ್‌ಸ್ಟೇಬಲ್ ಶಿವಾನಂದ ಬಿ. ಅವರನ್ನು ಸನ್ಮಾನಿಸಲಾಯಿತು.ಉಪನ್ಯಾಸಕಿ ರೋಹಿಣಿ ನಿರೂಪಿಸಿದರು, ಕಾರ್ಟೂನ್ ಹಬ್ಬದ ಸಂಘಟಕ, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು. ಹಿರಿಯ ವ್ಯಂಗ್ಯಚಿತ್ರಕಾರರಾದ ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು ಸಹಕರಿಸಿದರು‌.

PREV

Recommended Stories

ಸೆಸ್ಕ್ ಅಭಿಯಂತರಗೆ ಸನ್ಮಾನ ಕಾರ್ಯಕ್ರಮ
ಕಟೀಲು ಏಳು ಮೇಳಗಳ ದೇವರು, ಪರಿಕರಗಳ ಮೆರವಣಿಗೆ