ಕನ್ನಡಪ್ರಭ ವಾರ್ತೆ ಮೈಸೂರು
ತೇಜಸ್ವಿ ಕಥೆ, ಕಾದಂಬರಿ ತಮ್ಮ ಸಾಹಿತ್ಯದ ಮೂಲಕ ಪ್ರಕೃತಿಯ ವಿರೋಧಿ ನೀತಿಗಳನ್ನು ಮಾಡಬೇಡಿ ಎಂದಿದ್ದರು. ಆದರೆ, ನಾವು ತದ್ವಿರುದ್ಧ ದಿಕ್ಕಿನಲ್ಲಿದ್ದೇವೆ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ತಿಳಿಸಿದರು.ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಪುಸ್ತಕ ಪ್ರಕಾಶನ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ನಿರಂತರ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ನಡೆದ ಕರ್ವಾಲೋ- 50 ಪೂರ್ಣಚಂದ್ರ ತೇಜಸ್ವಿ ಜನ್ಮ ದಿನ, ತೇಜಸ್ವಿ ಮತ್ತು ಪರಿಸರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಎಂದರೆ ಶೇ. 40 ಪರ್ಸೆಂಟ್ ನೆನಪು ಆಗಲಿದೆ. ನಲ್ವತ್ತು ಪರ್ಸೆಂಟ್ ಭ್ರಷ್ಟಚಾರವಾದರೂ ಭಿಕ್ಷುಕರಾಗಿ ಬದುಕಬಹುದು. ಆದರೆ, ಶೇ. 80ರಷ್ಟು ಪ್ರಕೃತಿಯನ್ನು ಕೊಟ್ಟು ಬದುಕಲು ಸಾಧ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಜೀವ ವಿಕಾಸಕ್ಕೆ ಕೊನೆಯೆಂದು ಎಂದು ಕರ್ವಾಲೋ ಕಾದಂಬರಿಯಲ್ಲಿ ಬರುವ ಸಾಲು ಪ್ರತಿ ಕ್ಷಣ ಕುತೂಹಲದಿಂದ ಬದುಕುಬೇಕು ಎನ್ನುವುದನ್ನು ಹೇಳುತ್ತದೆ. ತೇಜಸ್ವಿ ಅವರು ಅಂದು ಹೇಳಿದ ಮಾತುಗಳು ಇಂದು ವಿಶ್ವವಿದ್ಯಾನಿಲಯದಲ್ಲಿ ಚರ್ಚೆ ಆಗುತ್ತಿದೆ. ಈಗ ನಾವು ಕಟ್ಟಿರುವ ಸಾಮಾಜಿಕ ಪರಿಸರ ದುಷ್ಟವಾಗಿದೆ. ಜಾತೀಯತೆ, ಶ್ರೇಣಿಕೃತ ಬದುಕು ಬಿಟ್ಟು ಕೊಟ್ಟಿಲ್ಲ. ಜ್ಞಾನದ ಅರ್ಥ ಗೊತ್ತಿಲ್ಲ. ಇರುವ ಪರಿಸರ ನಾಶ ಮಾಡಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಅಧಿಕಾರಶಾಹಿಗಳು ನಿರ್ಧಾರ ಮಾಡಿದ್ದು ಹರಿಯುವ ನದಿ ನೀರನ್ನು ತಡೆದು ಪಂಪ್ ನಲ್ಲಿ ಸಂಗ್ರಹ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಆ ಮೂಲಕ ಇಡೀ ಪಶ್ಚಿಮಘಟ್ಟವನ್ನು ನರಕ ಮಾಡಿ ಬಂಜರು ಭೂಮಿ ಮಾಡಲು ಮುಂದಾಗಿದ್ದಾರೆ. ಈಗ ಪಶ್ಚಿಮ ಘಟ್ಟ ಉಳಿಸಿ ಎಂಬ ಹೋರಾಟ ಆರಂಭವಾಗಿದೆ. ಯುರೋಪ್ ಮತ್ತು ಇತರೆ ದೇಶಗಳಲ್ಲಿ ಮನುಷ್ಯ ನಾಗರಿಕತೆಯ ಹೆಸರಿನಲ್ಲಿ ಮಾಡುವ ಕೆಲಸಗಳು ಪರಿಸರದ ಮೂಲ ತತ್ವಗಳೇ ಬದಲಾಗಿವೆ. ಹೀಗಾಗಿ ನಾಗರೀಕತೆ ಹೆಸರಿನಲ್ಲಿ ಪರಿಸರ ಮಾಡುತ್ತಿರುವ ಹಾನಿಯು ಆತಂಕವನ್ನು ಹುಟ್ಟಿಸಲಿದೆ. ಇಂತಹ ಕಾಲಘಟ್ಟದಲ್ಲಿ ತೇಜಸ್ವಿಯ ಮಾತುಗಳು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.ಆಧುನಿಕ ಮನುಷ್ಯ ಸೃಷ್ಟಿಸಿದ ಅತ್ಯಂತ ದುಷ್ಟ ಪದ ಎಂದರೆ ಅಭಿವೃದ್ಧಿ ಎಂದು ಅವರು ದೂರಿದರು.
ಪ್ರಕಾಶಕ, ತೇಜಸ್ವಿ ಒಡನಾಡಿ ಬಿ.ಎಂ. ಶ್ರೀರಾಮ್ ಮಾತನಾಡಿ, ಕರ್ವಾಲೋ ಬಗ್ಗೆ ಒಳ್ಳೆ ವಿಮರ್ಶೆ ಬರೆದದ್ದು ಲಂಕೇಶ್. ಕನ್ನಡ ಎಂಎ ವಿದ್ಯಾರ್ಥಿಯಾದ ತೇಜಸ್ವಿ ಅವರಿಗೆ ವಿಜ್ಞಾನದ ಮೇಲೆ ಆಸಕ್ತಿ ಯಾವ ರೀತಿ ಬೆಳೆಯಿತು ಎಂಬ ಕುರಿತು ಉತ್ತರಿಸಿದರು.ಮೈಸೂರು ವಿವಿ ಗ್ರಂಥಾಲಯಕ್ಕೆ ಬರುತ್ತಿದ್ದ ಸಾಹಿತ್ಯ ಮತ್ತು ವಿಜ್ಞಾನ ಪತ್ರಿಕೆಗಳ ಅಗಾಧವಾದ ಅಧ್ಯಯನ, ನ್ಯಾಷನಲ್ ಜಿಯಾಗ್ರಫಿ ಪ್ರಭಾವ ಬೀರಿದೆ. ಸಿದ್ಧ ಮಾದರಿಯನ್ನು ಹೊಡೆದ ಕಾದಂಬರಿ ಕಾರ್ವಾಲೋ. ಆಗ ನಾಯಕ, ನಾಯಕಿ ವೈಭವೀಕರಣ. ಅತ್ತೆ- ಸೊಸೆ ಕಾಟ ಇವೇ ಸಂಗತಿಗಳಿದ್ದವು. ಇದನ್ನು ತೇಜಸ್ವಿ ಹೊಡೆದರು ಎಂದು ಹೇಳಿದರು.
ಪೂರ್ಣಚಂದ್ರ ತೇಜಸ್ವಿಗೆ ಕವಿ ಕುವೆಂಪು ಪುತ್ರನಾಗದೇ ಬೆಳೆಯುವ ಸವಾಲು ಇತ್ತು. ಕರ್ವಾಲೋ ಕಾದಂಬರಿ ಪ್ರಕಟವಾದಾಗ ಸಾಹಿತ್ಯ ವಲಯ ಹೇಗೆ ಸ್ವೀಕರಿಸಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮ್ ಅವರು, ಕನ್ನಡ ಸಾಹಿತ್ಯ ವಲಯ ಯಾವಾಗಲೂ ಮಂದ. ಆಗ ಕೆಲವರು ವಿಜ್ಞಾನ ಲೇಖಕ ಎಂದು ಗೇಲಿ ಮಾಡಿದರು. ಸ್ನೇಹಿತರು ಸಿಕ್ಕಾಪಟ್ಟೆ ಹೊಗಳಿದ್ದಾಗಿ ತಿಳಿಸಿದರು.ಕಡಿದಾಳ್ ಪ್ರಕಾಶ್ ಅವರು ನಾ ಕಂಡಂತೆ ತೇಜಸ್ವಿ ವಿಷಯದ ಕುರಿತು, ಕೃಷಿ ಹೋರಾಟ, ಛಾಯಾಗ್ರಹಣ ಮತ್ತು ಪರಿಸರದ ಕುರಿತು ಎಂ.ವಿ. ಕೃಷ್ಣ, ತೇಜಸ್ವಿ ಅವರ ಒಡನಾಟದಲ್ಲಿ ರಾಘವೇಂದ್ರ ಮಾತನಾಡಿದರು.
ಪ್ರೊ. ಕಾಳಚನ್ನೇಗೌಡ, ಅಭಿರುಚಿ ಪ್ರಕಾಶನ ಅಭಿರುಚಿ ಗಣೇಶ್, ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ಇದ್ದರು.