ಕೊಪ್ಪಳ: ತಾಲೂಕಿನ ಕವಲೂರು ಗ್ರಾಮದ ಬಳಿ ರಸ್ತೆ ದುರಸ್ತಿಗೆ ಆಗ್ರಹಿಸಿದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 14 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ಹಾಗೂ ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ಹಾಗೂ ತಹಸೀಲ್ದಾರ್ ವಿಠ್ಠಲ್ ಚೌಗಲೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ಸರ್ಕಾರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಹನುಮಂತಪ್ಪ, ಮಾರುತಿ, ಉಮೇಶಗೌಡ, ಮಹಾಂತೇಶಗೌಡ, ಶರಣಪ್ಪ ಬಬ್ಲಿ, ಅಜೀಮಸಾಬ, ಸುರೇಶ ಕಾಳಿ, ಅಲಿಯಾಸಾಬ್, ಬಸವರಾಜ, ಶಿವು, ಭರಮರೆಡ್ಡಿ, ನಜೀರಸಾಬ, ಮಲ್ಲಿಕಾರ್ಜುನ, ಶಶಿಕಾಂತ ಮೇಲೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಶಶಿಕಾಂತನನ್ನು ಬಂಧಿಸಲಾಗಿದೆ. ಆದರೆ ಬೇರೆ ಪ್ರಕರಣದ ಕಾರಣಕ್ಕಾಗಿ ಸದ್ಯ ಬಂಧಿಸಲಾಗಿದೆ. ಪ್ರತಿಭಟನೆ ನಡೆಸಿದ ಕೇಸ್‌ನಲ್ಲಿ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ರಸ್ತೆ ಸರಿಪಡಿಸಿ ಎಂದು ಕೇಳಿದ ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸಿದ ತಹಸೀಲ್ದಾರ್ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ನಿಷ್ಕ್ರಿಯ-ಸಿವಿಸಿ ಆರೋಪರಸ್ತೆ ರಿಪೇರಿಗೆ ಆಗ್ರಹಿಸಿ ಪ್ರತಿಭಟನೆ ಆಯೋಜಿಸಿದ್ದ ಕವಲೂರು, ಅಳವಂಡಿ, ಹಂದ್ರಾಳ, ಗುಡಿಗೇರಿ ಹಾಗೂ ಬನ್ನಿಕೊಪ್ಪ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ ಹಾಗೂ ಹಿಟ್ಲರ್ ಮಾದರಿ ಆಡಳಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಕಿಡಿ ಕಾರಿದ್ದಾರೆ.ಮೂಲಭೂತ ಸೌಕರ್ಯ ಬೇಕು ಎಂದು ಬೇಡಿಕೆ ಇಡುವುದು ತಪ್ಪೇ? ಸುಳ್ಳು ಆಶ್ವಾಸನೆ ಕೊಟ್ಟು ಮತ ಪಡೆಯುವಾಗ ಜನರ ಬೇಡಿಕೆಗಳು ತಮ್ಮ ಕಣ್ಣಿಗೆ ಕಾಣಲಿಲ್ಲವೇ? ಹಿಟ್ಲರ್ ಆಡಳಿತವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಕಾಂಗ್ರೆಸ್ ಪಕ್ಷ ಹೊರಟಿದೆಯೇ? ಎಂಬುದನ್ನು ಕೊಪ್ಪಳ ಶಾಸಕರು ಹಾಗೂ ಅವರ ಪಕ್ಷದ ನಾಯಕರು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಕವಲೂರು ಭಾಗದಲ್ಲಿ ರಸ್ತೆಗಳೇ ಮಾಯವಾಗಿವೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ನಿಷ್ಕ್ರಿಯವಾಗಿದ್ದಾರೆ. ತಾಲೂಕು ಆಡಳಿತ ಅದಕ್ಷವಾಗಿದೆ. ಇದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ ಜನರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ ತಹಸೀಲ್ದಾರ್ ವಿಠ್ಠಲ್ ಚೌಗಲಾ ಅವರನ್ನು ಈ ಕೂಡಲೇ ವರ್ಗಾಯಿಸಬೇಕು. ಕಾಂಗ್ರೆಸ್ ನಾಯಕರ ಆದೇಶದಂತೆ ಕೆಲಸ ನಿರ್ವಹಿಸುತ್ತಿರುವ ಅವರಿಗೆ ಕೊಪ್ಪಳದಲ್ಲಿ ಮುಂದುವರಿಯುವ ಯೋಗ್ಯತೆ ಹಾಗೂ ನೈತಿಕತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಶಾಸಕರು ಮಾಡಿದ ಅಭಿವೃದ್ಧಿ ಏನು? ಎಷ್ಟು ರಸ್ತೆಗಳನ್ನು ರಿಪೇರಿ ಮಾಡಿಸಿದ್ದಾರೆ? ಎಷ್ಟು ಹೊಸ ರಸ್ತೆ ನಿರ್ಮಿಸಿದ್ದಾರೆ? ಎಷ್ಟು ಪ್ರಮಾಣದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ? ಎಂಬುದನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.