ಹಾಕಿ ಆಟಗಾರರಿಗೆ ವಂಚಿಸಿದ ಸಂಸ್ಥೆ ವಿರುದ್ಧದ ಕೇಸ್‌ ರದ್ದಿಲ್ಲ : ಹೈಕೋರ್ಟ್

KannadaprabhaNewsNetwork |  
Published : Jun 04, 2026, 03:45 AM ISTUpdated : Jun 04, 2026, 09:19 AM IST
Karnataka High Court

ಸಾರಾಂಶ

ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿದ ಆರೋಪದ ಸಂಬಂಧ ಖೇಲೊ ಮಾಸ್ಟರ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದಪಡಿಸಲು ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

 ಬೆಂಗಳೂರು :  ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿದ ಆರೋಪದ ಸಂಬಂಧ ಖೇಲೊ ಮಾಸ್ಟರ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದಪಡಿಸಲು ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಕ್ರಿಮಿನಲ್ ಪ್ರಕರಣ ರದ್ದುಪಡಿಸಲಾಗದು

ಖೇಲೊ ಮಾಸ್ಟರ್‌ ಸಂಸ್ಥೆಯ ಖಜಾಂಜಿ ಎ. ಎನ್‌. ಸೋಮಯ್ಯ, ಅಧ್ಯಕ್ಷ ಎಚ್‌.ಎಂ. ಪ್ರಸನ್ನ, ಕಾರ್ಯದರ್ಶಿ ಎನ್.ಮಧು ಮತ್ತು ತಂಡದ ಮ್ಯಾನೇಜರ್‌ ಪಿ. ಕೆ. ತೇಜಶ್ರೀ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ದದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲಾಗದು ಎಂದು ನುಡಿಯಿತು.

ಆಗ ಅರ್ಜಿದಾರ ಪರ ವಕೀಲರು, ಅರ್ಜಿ ಹಿಂಪಡೆಯವುದಾಗಿ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ತನಿಖಾಧಿಕಾರಿಗಳ ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲ್ಪಿಸಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು.

ಅಲ್ಲದೇ, ಬಡ ಹಾಕಿ ಆಟಗಾರರಿಗೆ ವಂಚಿಸಿದ್ದೀರಿ. ಇದೇ ರೀತಿ ಕ್ರಿಕೆಟಿಗರಿಗೆ ವಂಚಿಸಲಾಗುವುದೇ? ಸಾಧ್ಯವೇ ಇಲ್ಲ. ನಂಬಿಸಿ ಆಟಗಾರರಿಗೆ ವಂಚಿಸಿರುವುದರಿಂದ ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಹಾಕಿ ಆಟ, ಆದರೆ ಏನನ್ನು ಬಾಕಿ ಉಳಿಸಿಲ್ಲ (ಗೇಮ್‌ ಹಾಕಿ, ಕುಚ್‌ ನಹೀ ಬಾಕಿ ಎಂದು ಮಾರ್ಮಿಕವಾಗಿ ನುಡಿದ ಪೀಠ, ಎಲ್ಲಾ ಆರೋಪಿಗಳು ಹಣ ಮರಳಿಸಬೇಕು ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.

15 ಆಟಗಾರರಿಂದ ತಲಾ 15 ಸಾವಿರ ರು. ವಸೂಲಿ

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೊಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ 15 ಸಾವಿರ ರು. ವಸೂಲಿ ಮಾಡಲಾಗಿತ್ತು. ವೀಸಾಗೆ ಅಗತ್ಯವಾದ ದಾಖಲೆ ಒದಗಿಸಲು ಆಟಗಾರರು ವಿಫಲರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆನಂತರ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರನಿಂದ 1.5 ಲಕ್ಷ ಸಂಗ್ರಹಿಸಲಾಗಿತ್ತು. ಅದಕ್ಕೂ ವೀಸಾ ಪಡೆಯಲು ಆಟಗಾರರು ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೆ, ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಆಟಗಾರರನ್ನು ಕರೆದೊಯ್ಯಲಾಗಿತ್ತು ಎಂದು ತಿಳಿಸಿದರು.

ದೂರುದಾರರ ಪರ ವಕೀಲರು, ಮೊದಲಿಗೆ ಕೊರಿಯಾಗೆ ಕರೆದೊಯ್ಯುವುದಾಗಿ ಹೇಳಿ 15 ಮಂದಿಯಿಂದ ತಲಾ 15 ಸಾವಿರ ಸಂಗ್ರಹಿಸಲಾಗಿತ್ತು. ಆನಂತರ ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವುದಾಗಿ ಹೇಳಿ 17 ಮಂದಿಯಿಂದ ತಲಾ 1.3 ಲಕ್ಷ ರು. ಬ್ಯಾಂಕ್‌ಗೆ ವರ್ಗಾವಣೆ, 1.7 ಲಕ್ಷ ರು. ನಗದನ್ನು ಸ್ವೀಕರಿಸಲಾಗಿದೆ. ಆಟಗಾರರ ಹೆಸರಿನಲ್ಲಿ ಪ್ರಾಯೋಜಕತ್ವದ ನೆಪದಲ್ಲೂ ಹಣ ಸಂಗ್ರಹಿಸಲಾಗಿದೆ. ಅದನ್ನು ಅರ್ಜಿದಾರರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬರ ಸ್ಥಿತಿ ವಿವರಣೆಗೆ ಸರ್ವಪಕ್ಷ ನಿಯೋಗ : ಡಿಕೆಶಿ
ಕೆ.ಆರ್.ಪುರ- ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಗೆ ₹450 ಕೋಟಿ : ಕೃಷ್ಣ ಬೈರೇಗೌಡ