ಬೆಂಗಳೂರು : ವಾಹನಗಳನ್ನು ಚಾಲಾಯಿಸಲು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ವಿರುದ್ಧ ಬಾಲಾಪರಾಧಿ ನ್ಯಾಯಿಕ ಕಾಯ್ದೆ (ಜೆಜೆ ಆಕ್ಟ್)ಯಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ನಗರದ ಹೊಸೂರು ರಸ್ತೆಯ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಆಹವಾಲು ಆಲಿಸಿ ಆಯುಕ್ತರು ಮಾತನಾಡಿದರು.
ರಸ್ತೆಯಲ್ಲಿ ಅತಿವೇಗವಾಗಿ ಮನಬಂದಂತೆ ಮಕ್ಕಳು ವಾಹನ ಚಾಲನೆ ಮಾಡುವ ಬಗ್ಗೆ ಕೋರಮಂಗಲದ ನಿವಾಸಿ ಪಾರ್ವತಿ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಅಪ್ರಾಪ್ತ ಮಕ್ಕಳ ಪೋಷಕರಿಗೆ ಕಾನೂನಿನ ಪಾಠ ಮಾಡಿದ್ದಾರೆ.
ವಾಹನ ಚಾಲನೆಗೆ 18 ವರ್ಷ ಮೇಲ್ಪಟ್ಟದ ವಯಸ್ಸು ನಿಗದಿಗೂ ಸಹ ವೈಜ್ಞಾನಿಕ ಕಾರಣವಿದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ತಮ್ಮ ಮಕ್ಕಳೆಷ್ಟೆ ಬುದ್ಧಿವಂತರಾಗಿದ್ದರೂ ಸಹ 18 ವರ್ಷಕ್ಕೆ ಅವರ ಮೆದಳು ಸಂಪೂರ್ಣವಾಗಿ ಬೆಳವಣೆಗೆ ಆಗಿರುವುದಿಲ್ಲ. ಹೀಗಾಗಿಯೇ ವಾಹನಗಳ ಚಾಲನೆಗೆ ವಯಸ್ಸಿನವರಿಗೆ ನಿರ್ಬಂಧವಿದೆ ಎಂದು ನುಡಿದರು.
ಇತ್ತೀಚಿಗೆ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಜೆ.ಜೆ ಕಾಯ್ದೆಯಡಿ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿ ಕೂಡಾ ವಾಹನಗಳನ್ನು ಚಾಲಾಯಿಸಲು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ಮೇಲೆ ಜೆಜೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.ಕಾರ್ಯಕ್ರಮದಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಡಾ। ಸಿ.ಕೆ.ಬಾಬಾ ಹಾಗೂ ದಕ್ಷಿಣ ವಿಭಾಗ (ಸಂಚಾರ) ಡಿಸಿಪಿ ಶಿವಪ್ರಕಾಶ್ ಉಪಸ್ಥಿತರಿದ್ದರು.
ಜಾಮರ್ ಸಮಸ್ಯೆ ಪರಿಹಾರ: ಆಯುಕ್ತ ಅಭಯ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೊಬೈಲ್ ಜಾಮರ್ ಅಳವಡಿಕೆಯಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದು ಆಯುಕ್ತ ದಯಾನಂದ್ ಭರವಸೆ ನೀಡಿದರು.
ಈ ಸಭೆಯಲ್ಲಿ ಸೆಂಟ್ರಲ್ ಜೈಲ್‌ನ ಜಾಮರ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಚನ್ನಕೇಶವ ನಗರದ ನಿವಾಸಿ ನಾಗೇಶ್ ಅವರು, ಸೆಂಟ್ರಲ್ ಜೈಲ್‌ನಲ್ಲಿ ಜಾಮರ್ ಅಳವಡಿಕೆಯಿಂದ ಸುತ್ತಮತ್ತ ಪ್ರದೇಶಗಳಲ್ಲಿ ನೆಲೆಸಿರುವ ಜನರಿಗೆ ಮೊಬೈಲ್ ಸಂಪರ್ಕಕ್ಕೆ ಅಡಚಣೆಯಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗಳನ್ನು ಸಹ ಬರಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಮಸ್ಯೆ ಪಹರಿಸುವ ಭರವಸೆ ನೀಡಿದರು.