ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ

KannadaprabhaNewsNetwork |  
Published : Apr 20, 2025, 01:52 AM ISTUpdated : Apr 20, 2025, 07:39 AM IST
6.ಮುತ್ತಪ್ಪ ರೈ 2ನೇ ಪತ್ನಿ ಅನುರಾಧ | Kannada Prabha

ಸಾರಾಂಶ

  ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮನಗರ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?:

ರಿಕ್ಕಿ ರೈ ಬೆಂಗಳೂರಿನ ಸದಾಶಿವನಗರ ಮತ್ತು ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಸದಾಶಿವನಗರದ ಮನೆಯಿಂದ ಸಂಜೆ 6ರ ಸುಮಾರಿಗೆ ಹೊರಟು ಕರಿಯಪ್ಪನದೊಡ್ಡಿ ಮನೆಗೆ ರಾತ್ರಿ 7ರ ಸುಮಾರಿಗೆ ತಲುಪಿದೆವು. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ, ರಾತ್ರಿ 11ರ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾದವು.

ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ನಾನು, ರಿಕ್ಕಿ ರೈ ಹಾಗೂ ಅಂಗರಕ್ಷಕ ರಾಜ್‌ಪಾಲ್ ಮೂವರೂ ಹೊರಟೆವು. ಮನೆ ಕಾಂಪೌಂಡ್‌ನಿಂದ ಅನತಿ ದೂರಕ್ಕೆ ಬಂದಾಗ ಟಪ್ ಎಂಬ ಶಬ್ದ ಕೇಳಿತು. ಟೈಯರ್‌ನಲ್ಲಿ ಸಮಸ್ಯೆ ಇರಬೇಕೆಂದು ಕಾರು ನಿಲ್ಲಿಸಿ ಪರಿಶೀಲಿಸಿದಾಗ ಎಲ್ಲವೂ ಸರಿ ಇತ್ತು. ಬಳಿಕ ಅಲ್ಲಿಂದ ಹೊರಟು ರೈಲ್ವೆ ಕ್ರಾಸ್‌ವರೆಗೆ ಬಂದಾಗ ರಿಕ್ಕಿ ಅವರು ತನ್ನ ಪರ್ಸ್ ಮರೆತಿರುವುದಾಗಿ ಹೇಳಿದರು. ಕಾರನ್ನು ಮತ್ತೆ ಮನೆಗೆ ಹಿಂದಿರುಗಿಸಿದೆವು.

ಮನೆಗೆ ಬಂದ ಒಂದೂವರೆ ತಾಸಿನ ಬಳಿಕ ಮಧ್ಯರಾತ್ರಿ 12.50ಕ್ಕೆ ಮತ್ತೆ ಬೆಂಗಳೂರಿಗೆ ಹೊರಟೆವು. ಕಾರು ಕಾಂಪೌಂಡ್ ದಾಟಿ ಸ್ವಲ್ಪ ಮುಂದಕ್ಕೆ ಬಂದಾಗ, ಈ ಹಿಂದೆ ಟಪ್ ಎಂದು ಶಬ್ದ ಕೇಳಿದ ಜಾಗದಲ್ಲೇ ಏಕಾಏಕಿ ಗುಂಡಿನ ದಾಳಿ ನಡೆಯಿತು. ನನಗೆ ತಪ್ಪಿದ ಗುಂಡು ಹಿಂದೆ ಕುಳಿತಿದ್ದ ರಿಕ್ಕಿ ಅವರ ಮೂಗು ಮತ್ತು ಬಲತೋಳಿಗೆ ತಗುಲಿ ರಕ್ತ ಸೋರತೊಡಗಿತು.

ಕೂಡಲೇ ನಾನು ಕೆಳಕ್ಕಿಳಿದು ಕಾರಿನ ಡೋರ್ ತೆರೆದು ನೋಡಿದಾಗ, ರಿಕ್ಕಿ ಅವರ ಮೂಗು ಛಿದ್ರವಾಗಿ ಮುಖ ರಕ್ತಮಯವಾಗಿತ್ತು. ಕೂಡಲೇ ನನ್ನ ಶರ್ಟ್ ಬಿಚ್ಚಿ ರಕ್ತ ಸೋರಿಕೆಯಾಗದಂತೆ ತಡೆಯಲು ಯತ್ನಿಸಿದೆ. ಬಳಿಕ, ಅದೇ ಕಾರಿನಲ್ಲಿ ರಾಜ್‌ಪಾಲ್ ಮತ್ತು ನಾನು ರಿಕ್ಕಿ ಅವರನ್ನು ಬಿಡದಿಯ ಭರತ್‌ ಕೆಂಪಣ್ಣ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು. ವೈದ್ಯರ ಸೂಚನೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ರಿಕ್ಕಿ ಅವರನ್ನು ಕರೆತಂದು ದಾಖಲಿಸಿದೆವು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

ರಿಕ್ಕಿಗೆ ಮೊದಲಿನಿಂದಲೂ ಜೀವ ಬೆದರಿಕೆ ಇತ್ತು:

ತನಗೆ ಜೀವ ಬೆದರಿಕೆ ಇರುವುದಾಗಿ ಹೇಳುತ್ತಿದ್ದ ರಿಕ್ಕಿ ಅವರು ಅತ್ಯಂತ ಎಚ್ಚರಿಕೆಯಿಂದ ಇರುತ್ತಿದ್ದರು. ಗುಂಡಿನ ದಾಳಿ ಬಳಿಕ ಘಟನೆ ಹಿಂದೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್‌ ಹಾಗೂ ಸಹಚರರು ಇರುವ ಕುರಿತು ಬಲವಾದ ಅನುಮಾನ ವ್ಯಕ್ತಪಡಿಸಿದರು. ತಂದೆ ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಸಾಯುವುದಕ್ಕೆ ಮುಂಚೆ, ರಾಕೇಶ್ ಮತ್ತು ಅನುರಾಧ ಅವರು ಜೀವ ಬೆದರಿಕೆ ಹಾಕಿ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಹಾಗಾಗಿ, ಸದಾ ಎಚ್ಚರಿಕೆಯಿಂದ ಇರುವಂತೆ ತಂದೆ ಹೇಳುತ್ತಿದ್ದರು ಎಂದು ರಿಕ್ಕಿ ಹೇಳಿದ್ದರು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

ರಿಕ್ಕಿ ವಿವಾಹಿತರಾಗಿದ್ದು, ಪತ್ನಿ ಮತ್ತು ಮಗು ವಿದೇಶದಲ್ಲಿ ನೆಲೆಸಿದ್ದಾರೆ. ಕುಟುಂಬದ ಜೊತೆ ವಿದೇಶದಲ್ಲೂ ಇರುತ್ತಿದ್ದ ರಿಕ್ಕಿ, ವ್ಯವಹಾರ ಸಂಬಂಧ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಬಂದಿರುವುದನ್ನು ತಿಳಿದುಕೊಂಡಿರುವ ಆರೋಪಿಗಳು ಸಂಚು ರೂಪಿಸಿ, ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಬಸವರಾಜು ದೂರಿನಲ್ಲಿ ಆರೋಪಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು