ಯಾದಗಿರಿಯಲ್ಲಿ ನಕಲಿ ವೈದ್ಯರಿಗೆ ಮಳಿ ಬಾಡಿಗೆ ನೀಡಿದರೆ ಕೇಸ್‌!

KannadaprabhaNewsNetwork |  
Published : Aug 18, 2025, 12:00 AM IST
ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಅರ್ಹ ವೈದ್ಯರು ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ, ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ವಿವಿಧ ಅರ್ಹ ವೈದ್ಯರ ಬಳಿ ತೆರಳಿ ಕೆಪಿಎಂಇ ನೋಂದಣಿ ಪರಿಶೀಲಿಸಿದರು. | Kannada Prabha

ಸಾರಾಂಶ

ವಿದ್ಯಾರ್ಹತೆ ಇರದ ನಕಲಿ ವೈದ್ಯರಿಗೆ ಮನೆ ಅಥವಾ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿದರೆ ಮಾಲೀಕರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಕಲಿ ವೈದ್ಯರು ಬರೆದಿರುವ ಚೀಟಿಗಳಿಗೆ ಔಷಧಿಗಳನ್ನು ನೀಡಿದರೆ ಅಂಗಡಿಗಳ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಆಯುಷ್ ವೈದ್ಯರು ಅಲೋಪಥಿ ಔಷಧಿಗಳ ಬಳಸಿದರೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿದ್ಯಾರ್ಹತೆ ಇರದ ನಕಲಿ ವೈದ್ಯರಿಗೆ ಮನೆ ಅಥವಾ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿದರೆ ಮಾಲೀಕರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಕಲಿ ವೈದ್ಯರು ಬರೆದಿರುವ ಚೀಟಿಗಳಿಗೆ ಔಷಧಿಗಳನ್ನು ನೀಡಿದರೆ ಅಂಗಡಿಗಳ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಆಯುಷ್ ವೈದ್ಯರು ಅಲೋಪಥಿ ಔಷಧಿಗಳ ಬಳಸಿದರೆ ಕ್ರಮ ಕೈಗೊಳ್ಳಲಾಗುವುದು.

ಯಾದಗಿರಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಅರ್ಹ ವೈದ್ಯರೂ ಸಹ ಕೆಪಿಎಮ್‌ಇ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ನಕಲಿ ವೈದ್ಯರಿಗೆ ಅಂಗಡಿಯಾಗಲೀ, ಕೋಣೆಗಳಾಗಲೀ ನೀಡಬಾರದು. ಒಂದು ವೇಳೆ, ನಕಲಿ ವೈದ್ಯರಿಗೆ ಬಾಡಿಗೆ ನೀಡಿದರೆ ಮನೆ- ಅಂಗಡಿ ಮಾಲೀಕರ ವಿರುದ್ಧವೇ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದರ್ ತಿಳಿಸಿದ್ದಾರೆ.

ಆಯುರ್ವೇದ, ಹೋಮಿಯೋಪಥಿ ವೈದ್ಯರು ಯಾವುದೇ ಕಾರಣಕ್ಕೂ ಅಲೋಪಥಿ ಔಷಧಿಗಳನ್ನು ರೋಗಿಗಳಿಗೆ ಕೊಡಬಾರದು. ಈ ತರಹ ಕ್ರಾಸ್ (ತದ್ವಿರುದ್ಧ) ಚಿಕಿತ್ಸೆ ನೀಡಿದ್ದು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅರ್ಹ ವೈದ್ಯರು ಕಡ್ಡಾಯವಾಗಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ನಡೆಸಬೇಕು. ಕಡ್ಡಾಯವಾಗಿ ರೋಗಿಯ ಚಾರ್ಟರ್ ಹಾಗೂ ಶುಲ್ಕದ ವಿವರಗಳ (ದರಪಟ್ಟಿ) ನಾಮಫಲಕವನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದರ್ಶಿಸಬೇಕೆಂದು ಸೂಚಿಸಿದ್ದಾರೆ.

ನಗರದ ವಿವಿಧೆಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಯಾದಗಿರಿ ನಗರದ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ಕೊಟ್ಟು, ಕೆಪಿಎಮ್‌ಇ ನಿಯಮಾನುಸಾರ ಕರ್ತವ್ಯ ನಿರ್ವಹಿಸದ ಆಸ್ಪತ್ರೆಗಳ ಹಾಗೂ ಕ್ಲಿನಿಕ್‌ಗಳಿಗೆ ನೋಟಿಸ್ ಜಾರಿ ಮಾಡಿರುವುದು ಮತ್ತು ಅರ್ಹ ಪದವಿಯನ್ನು ಹೊಂದಿರುವ ವೈದ್ಯರು ಕಡ್ಡಾಯವಾಗಿ ಕೆಪಿಎಂಇ ಕಾಯ್ದೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ನಡೆಸಲು ತಾಕೀತು ಮಾಡಿದರು.

ನಕಲಿ ವೈದ್ಯರ ಕ್ಲಿನಿಕ್, ಆಸ್ಪತ್ರೆಗಳನ್ನು ಬಂದ್‌ ಮಾಡಿ, ಇಂತಹವರ ಮೇಲೆ ಪ್ರಕರಣ ಮಾಡಲು ತಂಡ ರಚಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಮಾಡಿದ್ದಾರೆ. ಇದರಂತೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಎಲ್ಲ ತಾಲೂಕಿನ, ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ತಹಸಿಲ್ದಾರರು ಹಾಗೂ ವೃತ್ತ ಪೋಲಿಸ್ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಯಾದಗಿರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಯೋತಿ ಕಟ್ಟಿಮನಿ, ಯಾದಗಿರಿ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸೂಗೂರಪ್ಪ, ಸಿಬ್ಬಂದಿ ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌