ಕುಂದಾಪುರ: ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ಮೂಲಕ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಹೋಗಿ ಲಕ್ಷಾಂತರ ರು. ಕಳೆದುಕೊಂಡ ಘಟನೆ ನಡೆದಿದೆ.
ಅಶೋಕ್ (53) ಎಂಬವರು ಷೇರು ಮಾರುಕಟ್ಟೆ ಸಲಹೆಗಾರರಾಗಿದ್ದು, ಅವರ ಪರಿಚಯದ ಹಾಸನ ಮೂಲದ ಗೀತಾ ಎಂಬವರು ಬೆಂಗಳೂರಿಗೆ ಕರೆಸಿಕೊಂಡು ತನ್ನ ಮಗಳು ಸಿಂಚನಾ ಮತ್ತು ಅಳಿಯ ಪ್ರಖ್ಯಾತ್ ವಿ.ಪಿ. ಅವರನ್ನು ಪರಿಚಯಿಸಿದ್ದರು. ಪ್ರಖ್ಯಾತ್ ಅವರು ಎಐ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡಿದ್ದು, ಕೇಂದ್ರ ಕಚೇರಿ ದುಬೈನಲ್ಲಿರುವುದಾಗಿ ನಂಬಿಸಿದ್ದರು. ಅದರಂತೆ ಅಶೋಕ್ ಅವರು ತಮ್ಮ ಪರಿಚಯಸ್ಥರಿಂದ ಒಟ್ಟು 66,33,600 ರು. ಗಳನ್ನು ಸಿಂಚನಾ ಮತ್ತು 4,50,000 ರು.ಗಳನ್ನು ಪ್ರಖ್ಯಾತ್ ಅವರ ಖಾತೆಗೆ ಜಮೆ ಮಾಡಿಸಿದ್ದರು. ನಂತರ ವೆಬ್‌ಸೈಟ್ ಸ್ಥಗಿತಗೊಂಡಿದ್ದು, ಮೂವರು ಆರೋಪಿಗಳು ಸರಿಯಾಗಿ ಸ್ಪಂದಿಸದೇ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಹಣವನ್ನು ಹಿಂದಕ್ಕೆ ನೀಡದೇ ಮೋಸ ಮಾಡಿದ್ದಾರೆ ಎಂದು ಅಶೋಕ್ ಅವರು ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.