ಪದೇ ಪದೇ ಜಾತಿ ಗಣತಿಯಿಂದ ಸಂವಿಧಾನದ ಆಶಯಕ್ಕೆ ಅಪಚಾರ: ಮಾಜಿ ಮೇಯರ್‌ ಸಂದೇಶ ಸ್ವಾಮಿ

KannadaprabhaNewsNetwork |  
Published : Jun 13, 2025, 03:52 AM IST
34 | Kannada Prabha

ಸಾರಾಂಶ

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಔನತ್ಯಕ್ಕೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪದೇ ಪದೇ ಜಾತಿ ಗಣತಿ ನಡೆಸುವ ಮೂಲಕ ಶ್ರೇಷ್ಠ ಸಂವಿಧಾನದ ಆಶಯಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಜಾತಿ ಗಣತಿಗೆ ನಿರ್ಣಯಿಸಿರುವ ಸಂದರ್ಭದಲ್ಲಿ ರಾಜ್ಯದಲ್ಲಿ 2ನೇ ಬಾರಿ ಸಮೀಕ್ಷೆಗೆ ಮುಂದಾಗಿದೆ. ಒಂದು ಸಮೀಕ್ಷೆಗೆ ಸಾರ್ವಜನಿಕರ ಕೋಟ್ಯಾಂತರ ರೂ. ಹಣ ಹಾಗೂ ಮಾನವ ಸಂಪನ್ಮೂಲ ಬಳಸಲಾಗುತ್ತದೆ. ಈ ಗೊಂದಲಮಯ ಜಾತಿ ಗಣತಿಗಳಿಂದ ಜನರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುವುದೋ ಗೊತ್ತಿಲ್ಲ. ಆದರೆ, ಸಾರ್ವಜನಿಕರ ಹಣ ಪೋಲಾಗುತ್ತಿರುವುದಕ್ಕೆ ದೊಡ್ಡ ನಿದರ್ಶನ ಎಂದು ದೂರಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆದರೆ ರಾಜಕೀಯ ಉದ್ದೇಶದಿಂದ ಒಂದೊಂದು ರಾಜ್ಯಗಳಲ್ಲಿ ಒಂದೊಂದು ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಶ್ರೇಷ್ಠ ಸಂವಿಧಾನದ ಆಶಯಕ್ಕೆ ಅಪಚಾರವೆಸಗಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವತೆಯೊಂದಿಗೆ ವ್ಯವಸ್ಥಿತವಾಗಿ ಜಾತಿ ಗಣತಿ ನಡೆಸಿದರೆ ಒಳ್ಳೆಯದು. ಅದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುವುದಿಲ್ಲ. ಅಲ್ಲದೆ ಸಾರ್ವಜನಿಕರಿಗೂ ಪದೇ ಪದೇ ಕಿರಿಕಿರಿ ಆಗುವುದು ತಪ್ಪುತ್ತದೆ. ಗಣತಿಗೆ ಬಳಸುವ ಶಿಕ್ಷಕರೂ ಪಾಠ- ಪ್ರವಚನದ ಕಡೆ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಔನತ್ಯಕ್ಕೆ ಶ್ರಮಿಸಬೇಕು. ಆದರೆ, ಪರಸ್ಪರ ವೈರುಧ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದ ಜನಸಾಮಾನ್ಯರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಿದೆ. ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!